ಎಎಪಿ, ಬಿಜೆಪಿ, ಕಾಂಗ್ರೆಸ್ ಧ್ವಜಗಳು
ಪ್ರಜಾವಾಣಿ ಹಾಗೂ ಪಿಟಿಐ ಚಿತ್ರಗಳು
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಪ್ರಕಟಿಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರಕ್ಕೇರಲಿದೆ ಎಂದು ಅಂದಾಜಿಸಿವೆ.
ಮೂರನೇ ಬಾರಿ ಅಧಿಕಾರಕ್ಕೇರುವ ಎಎಪಿ ಕನಸು ಭಗ್ನಗೊಳ್ಳುವ ಸಾಧ್ಯತೆ ಹೆಚ್ಚು ಎಂದೂ ಈ ಸಮೀಕ್ಷೆಗಳು ಹೇಳಿವೆ. ಇದರೊಂದಿಗೆ ಕಾಂಗ್ರೆಸ್‌ನ ಶೂನ್ಯ ಸಾಧನೆ ಈ ಬಾರಿಯೂ ಮುಂದುವರಿಯಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿವೆ.
ಒಂದು ಕ್ಷೇತ್ರವನ್ನು ಕಾಂಗ್ರೆಸ್ ಗೆಲ್ಲಬಹುದು ಎಂದು ಮ್ಯಾಟ್ರಿಜ್ ಸಂಸ್ಥೆ ಹೇಳಿದೆ. ಪೀಪಲ್ಸ್ ಪಲ್ಸ್ ಸಮೀಕ್ಷೆಯಲ್ಲಿ ಶೂನ್ಯ, ಪೀಪಲ್ಸ್ ಇನ್‌ಸೈಟ್‌ನಲ್ಲಿ ಶೂನ್ಯ ಅಥವಾ ಒಂದು ಕ್ಷೇತ್ರ ಎಂದಿವೆ. ಚಾಣಕ್ಯ ಸ್ಟ್ರಾಟಜಿ ಸಂಸ್ಥೆಯ ಸಮೀಕ್ಷೆಯಲ್ಲಿ ಮಾತ್ರ ಕಾಂಗ್ರೆಸ್ 2ರಿಂದ 3 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಹೇಳಿದೆ.
ಆಡಳಿತಾರೂಢ ಎಎಪಿಯು ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ. 1998ರ ನಂತರ ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿ ಬಿಜೆಪಿ ಇದೆ. 2020ರ ಚುನಾವಣೆಯಲ್ಲಿ ಶೇ 62.82ರಷ್ಟು ಮತದಾನವಾಗಿತ್ತು. 2015ರಲ್ಲಿ ಶೇ 67.47ರಷ್ಟು ಮತದಾನವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.