ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಮುಂದಿನ ಹತ್ತು ದಿನಗಳ ಒಳಗಾಗಿ ಸೂಕ್ತವಾದ ಸರ್ಕಾರಿ ವಸತಿಗೃಹ ಹಂಚಿಕೆಯಾಗಲಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ದೆಹಲಿ ಹೈಕೋರ್ಟ್‌ಗೆ ಗುರುವಾರ ಮಾಹಿತಿ ನೀಡಿದ್ದಾರೆ.
ನ್ಯಾ. ಸಚಿನ್ ದತ್ತ ಅವರಿದ್ದ ಪೀಠದ ಎದುರು ವರ್ಚ್ಯುಯಲ್ ವೇದಿಕೆ ಮೂಲಕ ವಾದ ಮಂಡಿಸಿದ ಮೆಹ್ತಾ, ‘ನನ್ನ ಈ ಹೇಳಿಕೆಯನ್ನು ದಾಖಲಿಸಿಕೊಳ್ಳಿ’ ಎಂದು ಮನವಿ ಮಾಡಿದರು.
ಈ ಹೇಳಿಕೆ ದಾಖಲಿಸಿಕೊಂಡ ಪೀಠವು, ಇದರಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವಂತೆ ತಾಕೀತು ಮಾಡಿತು. ಜತೆಗೆ ರಾಜಕಾರಣಿಗಳು ಮಾತ್ರವಲ್ಲ ಇತರರ ವಿಷಯದಲ್ಲೂ ಮುತುವರ್ಜಿ ವಹಿಸುವಂತೆ ಸಚಿವಾಲಯಕ್ಕೆ ಸೂಚಿಸಿತು.
ಎಎಪಿ ಪರವಾಗಿ ಹಿರಿಯ ವಕೀಲ ರಾಹುಲ್ ಮಲ್ಹೋತ್ರಾ ವಾದ ಮಂಡಿಸಿ, ‘ಕೇಜ್ರಿವಾಲ್ ಅವರಿಗೆ ಮಾದರಿ 7 ಅಥವಾ ಮಾದರಿ 8 ಬಂಗಲೆಯನ್ನು ಹಂಚಿಕೆ ಮಾಡಬೇಕು. ಆದರೆ ಮಾದರಿ 5ರ ಮನೆ ನೀಡಿ ಕೆಳದರ್ಜೆಗೆ ಇಳಿಸಬಾರದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇದರ ಪರಿಹಾರ ಮಾತುಕತೆಯಲ್ಲಿದೆಯೇ ಹೊರತು, ವ್ಯಾಜ್ಯದಲ್ಲಲ್ಲ. ನಿಮಗೆ ಒಪ್ಪಿಗೆಯಾದರೆ ಸಾಲಿಸಿಟರ್ ಜನರಲ್ ಅವರ ಬಳಿ ಮಾತನಾಡಿ. ಹಾಗೆಯೇ ಕೇಜ್ರಿವಾಲ್ ಅವರೂ ಸಚಿವಾಲಯವನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು’ ಎಂದು ಸಲಹೆ ನೀಡಿತು.
‘ಕೇಜ್ರಿವಾಲ್ ಅವರಿಗೆ ಬಂಗಲೆ ಹಂಚಿಕೆ ವಿಷಯವನ್ನು ಕೇಂದ್ರ ನಿರ್ವಹಿಸುತ್ತಿರುವ ಪರಿ ಸರಿಯಿಲ್ಲ. ಹಂಚಿಕೆಯ ಪ್ರಕ್ರಿಯೆಯು ಅನಿಯಂತ್ರಿತವಾಗಿ ಅಥವಾ ಕೆಲವರಿಗಷ್ಟೇ ಎಂಬಂತಿರಬಾರದು’ ಎಂದು ಪೀಠ ಈ ಹಿಂದಿನ ವಿಚಾರಣೆಯಲ್ಲಿ ಹೇಳಿತ್ತು ಎಂದು ಎಎನ್‌ಐ ವರದಿ ಮಾಡಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅರವಿಂದ ಕೇಜ್ರಿವಾಲ್ ಅವರು ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 6ಅನ್ನು 2024ರ ಅಕ್ಟೋರ್‌ನಲ್ಲಿ ತೊರೆದಿದ್ದರು. ನಂತರ ಮಂಡಿಹೌಸ್ ಬಳಿ ಇರುವ ತಮ್ಮದೇ ಪಕ್ಷದ ಸದಸ್ಯರೊಬ್ಬ ಅಧಿಕೃತ ನಿವಾಸದಲ್ಲಿ ನೆಲೆಸಿದ್ದಾರೆ.
ಲೋಧಿ ಎಸ್ಟೇಟ್‌ನಲ್ಲಿರುವ ಬಂಗಲೆ ಸಂಖ್ಯೆ 35 ಬೇಕು ಎಂದು ಎಎಪಿ ಪಟ್ಟು ಹಿಡಿದಿದೆ. ಇದರಲ್ಲಿ ಈ ಮೊದಲು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಾಸಿಸುತ್ತಿದ್ದರು.
ಈ ಬಂಗಲೆಯನ್ನು ಈಗಾಗಲೇ ಸಚಿವಾಲಯಕ್ಕೆ ಹಂಚಿಕೆ ಮಾಡಲಾಗಿದೆ. ಬಂಗಲೆಗಾಗಿ ರಾಜಕೀಯ ಪಕ್ಷಗಳು ಹಟಹಿಡಿಯಬಾರದು. ಲಭ್ಯತೆ ಮತ್ತು ಕಾಯ್ದಿರಿಸಿದ ಪಟ್ಟಿಗೆ ಅನುಗುಣವಾಗಿ ಹಂಚಿಕೆ ನಡೆಯಲಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.