ರಾಜೀವ್ ಚಂದ್ರಶೇಖರ್ ಮತ್ತು ಶಶಿ ತರೂರ್
ನವದೆಹಲಿ: ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ.
ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ವಿಚಾರಣೆಯನ್ನು ಏಪ್ರಿಲ್ 28ಕ್ಕೆ ನಿಗದಿ ಮಾಡಿದ್ದಾರೆ.
ತರೂರ್ ಅವರು 2024ರ ಏಪ್ರಿಲ್‌ನಲ್ಲಿ ಸಾರ್ವಜನಿಕವಾಗಿ ಹಲವು ವೇದಿಕೆಗಳಲ್ಲಿ ಆಡಿರುವ ಮಾತುಗಳು ಮಾನಹಾನಿಕರವಾಗಿ ಇದ್ದವು. ಆ ಮಾತುಗಳು ತಮ್ಮ ಪ್ರತಿಷ್ಠೆಯನ್ನು ಹಾಳುಮಾಡಿವೆ ಎಂದು ರಾಜೀವ್ ಅವರು ಅರ್ಜಿಯಲ್ಲಿ ಹೇಳಿದ್ದಾರೆ.
ಮಾನಹಾನಿಕರ ರೀತಿಯಲ್ಲಿ ಮಾತನಾಡದಂತೆ ತರೂರ್ ಅವರಿಗೆ ಸೂಚಿಸಬೇಕು ಎಂದು ರಾಜೀವ್ ಅವರು ಕೋರಿದ್ದಾರೆ. ಅಲ್ಲದೆ, ತರೂರ್ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು, ಹೆಸರು ಹಾಳುಮಾಡಿದ್ದಕ್ಕಾಗಿ ತಮಗೆ ತರೂರ್ ಅವರು ₹10 ಕೋಟಿ ಪರಿಹಾರ ಕೊಡಬೇಕು ಎಂದು ಕೂಡ ರಾಜೀವ್ ಕೋರಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಅವರು ಮತದಾರರಿಗೆ ಹಣ ನೀಡಿದ್ದರು ಎಂದು ತರೂರ್ ಅವರು ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು ಎಂಬ ಆರೋಪ ಇದೆ. ಈ ಮಾತುಗಳಿಗೆ ಸಂಬಂಧಿಸಿದಂತೆ ರಾಜೀವ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.