ADVERTISEMENT

ನವದೆಹಲಿಯಲ್ಲಿ ಸಂಸದೆಯ ಸರ ಕಳವು: ಸಾಮಾನ್ಯ ಜನರ ಗತಿಯೇನು? ಎಂದ ಮಾಜಿ ಸಿಎಂ ಆತಿಶಿ

ಪಿಟಿಐ
Published 4 ಆಗಸ್ಟ್ 2025, 14:22 IST
Last Updated 4 ಆಗಸ್ಟ್ 2025, 14:22 IST
ಆತಿಶಿ
ಆತಿಶಿ   

ನವದೆಹಲಿ: ತಮಿಳುನಾಡು ಕಾಂಗ್ರೆಸ್‌ ಸಂಸದೆ ಸುಧಾ ರಾಮಕೃಷ್ಣ ಅವರ ಸರಗಳ್ಳತನದ ಕುರಿತು ದೆಹಲಿಯ ಮಾಜಿ ಮುಖ್ಯಮಂತ್ರಿ ಆತಿಶಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ದೇಶದ ಸಾಮಾನ್ಯ ಜನರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಉಂಟುಮಾಡಿದೆ ಹೇಳಿದ್ದಾರೆ.

ಸುಧಾ ಅವರು 'ತಮಿಳುನಾಡು ಭವನ'ದ ಬಳಿ ಇಂದು (ಸೋಮವಾರ) ಬೆಳಿಗ್ಗೆ 6ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಚಿತ ವ್ಯಕ್ತಿಯೊಬ್ಬ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಆ ವೇಳೆ, ಸುಧಾ ಅವರ ಬಟ್ಟೆಯೂ ಹರಿದಿದೆ ಎಂದು ವರದಿಯಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಆತಿಶಿ, 'ನವದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತಿಗಣ್ಯರು ಓಡಾಡುವ ಪ್ರದೇಶದಲ್ಲೇ ಒಬ್ಬ ಸಂಸದೆಗೆ ಇಂತಹ ಪರಿಸ್ಥಿತಿ ಎದುರಾಗಿರುವುದು ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಜಾರಿ ಸಂಸ್ಥೆಗಳು ಹಾಗೂ ನಾಗರಿಕ ಸಂಸ್ಥೆಗಳ ನಡುವೆ ಸಮನ್ವಯದ ಅಗತ್ಯವನ್ನು ಎತ್ತಿ ತೋರಿಸುತ್ತದೆ' ಎಂದಿದ್ದಾರೆ.

ADVERTISEMENT

'ಸಂಸದೆಯೊಬ್ಬರಿಗೇ ಇಲ್ಲಿ ರಕ್ಷಣೆ ಇಲ್ಲ ಎಂದಮೇಲೆ, ಸಾಮಾನ್ಯ ಜನರು ಸುರಕ್ಷಿತವಾಗಿರಲು ಹೇಗೆ ಸಾಧ್ಯ' ಎಂದು ಕೇಳಿದ್ದಾರೆ.

ಆಮ್‌ ಆದ್ಮಿ ಪಕ್ಷ (ಎಎಪಿ) ಸೌರಭ್‌ ಭಾರಾದ್ವಾಜ್‌ ಅವರೂ ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ದೆಹಲಿಯಲ್ಲಿ ಇದೇನು ಹೊಸದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಸರ ಮತ್ತು ಮೊಬೈಲ್‌ ಕಳ್ಳತನ ದೆಹಲಿಯಲ್ಲಿ ತೀರಾ ಸಾಮಾನ್ಯ ಎನ್ನುವಂತಾಗಿದೆ. ಜನರೂ ಪೊಲೀಸರಿಗೆ ದೂರು ನೀಡುವುದಿಲ್ಲ. ಅದರಿಂದ ಸಮಯ ವ್ಯರ್ಥವಾಗುತ್ತದೆಯೇ ಹೊರತು ಏನೇನೂ ಬದಲಾಗುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ' ಎಂದು ಟ್ವೀಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.