ADVERTISEMENT

ದೆಹಲಿ 'ಕನ್ನಡಿಗರ' ನೆರವಿಗೆ ಬಾರದ 'ಕರ್ನಾಟಕ' ಭವನ!

ಕೊರೊನಾ: ಕರ್ನಾಟಕ ಸಂಘದ ಸಹಾಯಹಸ್ತ

ಸಿದ್ದಯ್ಯ ಹಿರೇಮಠ
Published 29 ಏಪ್ರಿಲ್ 2021, 19:29 IST
Last Updated 29 ಏಪ್ರಿಲ್ 2021, 19:29 IST
ಸಿ.ಎಂ. ನಾಗರಾಜ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ
ಸಿ.ಎಂ. ನಾಗರಾಜ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ   

ನವದೆಹಲಿ: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುವ ಇಲ್ಲಿನ ಕರ್ನಾಟಕ ಭವನ, ಕೊರೊನಾ ಸೋಂಕಿಗೆ ಒಳಗಾಗಿ ಪರದಾಡುತ್ತಿರುವ ದೆಹಲಿ ಕನ್ನಡಿಗರಿಗೆ ಯಾವುದೇ ರೀತಿಯ ನೆರವಿಗೆ ಬರುತ್ತಿಲ್ಲ.

ಸರ್ಕಾರಿ ಕೆಲಸ ಹಾಗೂ ಉತ್ತರ ಭಾರತದ ಪ್ರವಾಸಕ್ಕೆ ಬರುವ ರಾಜ್ಯದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ವಸತಿ ಮತ್ತು ಊಟ–ತಿಂಡಿ ವ್ಯವಸ್ಥೆ ಕಲ್ಪಿಸುವ ಹೋಟೆಲ್‌ನಂತೆಯೂ ಕಾರ್ಯ ನಿರ್ವಹಿಸುವ ಕರ್ನಾಟಕದ ಮೂರು ಭವನಗಳು ದೆಹಲಿಯಲ್ಲಿವೆ.

ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿನ ಹಾವಳಿ ಹೆಚ್ಚುತ್ತಿದ್ದಂತೆಯೇ ದೆಹಲಿಗೆ ಬರುವ ಅಧಿಕಾರಿಗಳು, ರಾಜಕಾರಣಿಗಳ ಸಂಖ್ಯೆಯೂ ವಿರಳವಾಗಿದೆ. ಭವನದ ನೂರಾರು ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೆಲಸ ಇಲ್ಲ. ಆದರೂ, ಕೊರೊನಾ ಸೋಂಕಿನಿಂದ ಪರದಾಡುತ್ತಿರುವ ದೆಹಲಿಯ ಕನ್ನಡಿಗರಿಗೆ ಕರ್ನಾಟಕ ಭವನದಿಂದ ಸಹಾಯ ನೀಡಬೇಕೆಂಬ ಪ್ರಯತ್ನಗಳೂ ರಾಜ್ಯ ಸರ್ಕಾರದಿಂದ ನಡೆದಿಲ್ಲ.

ADVERTISEMENT

ಕರ್ನಾಟಕ ಭವನದಲ್ಲಿ ಐಷಾರಾಮಿ ಕೊಠಡಿಗಳಿವೆ. ನೂರಾರು ವಾಹನಗಳು, ಚಾಲಕರು, ಸಿಬ್ಬಂದಿಗೆ ವಸತಿಗೃಹ ಸೌಲಭ್ಯ ಇದೆ. ಕೊರೊನಾ ಸೋಂಕಿತರನ್ನು ನೇರವಾಗಿ ಸಂಪರ್ಕಿಸದೆ ದೂರದಿಂದ ಅಥವಾ ದೂರವಾಣಿ ಕರೆಯ ಮೂಲಕ ಸಹಾಯ ಮಾಡಬಹುದಾಗಿದೆ. ಆದರೆ, ಎಷ್ಟೋ ಜನ ಸಹಾಯ ಕೇಳಿ ಕರೆ ಮಾಡಿದರೂ ಸ್ಪಂದನೆ ದೊರೆತಿಲ್ಲ.

ಆದರೆ, ಕಳೆದ ಒಂದು ತಿಂಗಳಿಂದ ಕೊರೊನಾ ದ್ವಿತೀಯ ಅಲೆ ದೆಹಲಿ ಕನ್ನಡಿಗರನ್ನೂ ಪೀಡಿಸಿದೆ. ಸೋಂಕಿಗೆ ಒಳಗಾಗಿರುವ ನೂರಾರು ಜನ ಕನ್ನಡಿಗರು ಆಸ್ಪತ್ರೆಯಲ್ಲಿ ಹಾಸಿಗೆ, ರೆಮ್‌ಡಿಸಿವಿರ್‌ ಇಂಜಕ್ಷನ್‌, ಆಕ್ಸಿಜನ್‌ ಸಿಲಿಂಡರ್‌ ಸಿಗದೆ ಪರದಾಡುತ್ತಿದ್ದಾರೆ.

ದೆಹಲಿ ಕರ್ನಾಟಕ ಸಂಘ ಅಂಥವರ ನೆರವಿಗೆ ಬಂದಿದೆ. ಹತ್ತಾರು ಜನ ಜೀವ ಕಳೆದುಕೊಂಡಿದ್ದು, ಸಂಬಂಧಿಗಳು ಶವಸಂಸ್ಕಾರಕ್ಕೂ ಪರದಾಡಿದ್ದಾರೆ. ಕೆಲವರ ಚಿಕಿತ್ಸೆಗೆ, ಅಂತ್ಯಸಂಸ್ಕಾರಕ್ಕೆ ಸಂಘದ ಪದಾಧಿಕಾರಿಗಳ ಕೋರಿಕೆಯ ಮೇರೆಗೆ ಐಎಎಸ್‌ ಅಧಿಕಾರಿಗಳಾದ ಸುಹಾಸ್‌, ರವಿಕುಮಾರ್, ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರಾಗಿರುವ ಡಾ.ಗುರುರಾಜ್‌, ಡಾ.ಅಕ್ಷಯ್, ಡಾ.ನಿರಂಜನ್‌, ಡಾ. ಕಪಿಲ್‌ ಸೋಲಂಕಿ ಮತ್ತಿತರರು ವ್ಯವಸ್ಥೆ ಮಾಡುವ ಮೂಲಕ ನೆರವಾಗಿದ್ದಾರೆ.

‘ಕಳೆದ ವಾರ ಸೋಂಕಿತರಾಗಿದ್ದ ನಮ್ಮ ತಂದೆಗೆ ತೀವ್ರ ತೊಂದರೆಯಾಗಿತ್ತು. ಆಸ್ಪತ್ರೆಗಳಿಗೆ ಅಲೆದಾಡಿದರೂ ಹಾಸಿಗೆ ಸಿಗಲಿಲ್ಲ. ಕರ್ನಾಟಕ ಭವನದ ಅಧಿಕಾರಿಗಳಿಗೆ ಕರೆ ಮಾಡಿದರೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ. ನೆರವೂ ದೊರೆಯಲಿಲ್ಲ. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ್‌ ಅವರಿಗೆ ಕರೆ ಮಾಡಿದಾಗ ಆಸ್ಪತ್ರೆಯಲ್ಲಿ ದಾಖಲಾಗಲು ನೆರವಾದರು. ತಂದೆಯವರು ಅಪಾಯದಿಂದ ಪಾರಾದರು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕರ್ನಾಟಕ ಮೂಲದ 22 ವರ್ಷ ವಯಸ್ಸಿನ ಯುವಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡದ ಅಧಿಕಾರಿ ಅಂತ್ಯಕ್ರಿಯೆ
ಕೇಂದ್ರದ ಗೃಹ ಸಚಿವಾಲಯದ ವೈರ್‌ಲೆಸ್‌ ವಿಭಾಗದಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡಿಗ ಎಂ.ಎಸ್‌. ನಂಜುಂಡಸ್ವಾಮಿ ಅವರು ಬುಧವಾರ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದು, ಅವರ ಅಂತ್ಯಸಂಸ್ಕಾರ ನೆರವೇರಿಸಲು ಕರ್ನಾಟಕ ಸಂಘ ನೆರವು ನೀಡಿದೆ.

ದೆಹಲಿಯಲ್ಲಿ ನಂಜುಂಡ ಸ್ವಾಮಿ ಅವರ ಜೊತೆಗಿರುವ ಪತ್ನಿ ಹಾಗೂ ಪುತ್ರಿಯೂ ಸೋಂಕಿನಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರ ಏಕೈಕ ಪುತ್ರ ಕೆಲಸದ ಕಾರಣ ಹೊರ ದೇಶದಲ್ಲಿದ್ದಾರೆ. ಸಂಬಂಧಿಗಳು ಕರ್ನಾಟಕದಲ್ಲಿದ್ದಾರೆ. ಬೆಳಗಿನ ಜಾವವೇ ನಿಧನ ಹೊಂದಿದ್ದ ನಂಜುಂಡಸ್ವಾಮಿ ಅವರ ಅಂತ್ಯಕ್ರಿಯೆಗೆ ಸಂಘದ ಸಿ.ಎಂ. ನಾಗರಾಜ್‌ ಹಾಗೂ ಅನಿಲ್‌ ಇಬ್ಬರೇ ವ್ಯವಸ್ಥೆ ಮಾಡಿ ಅಂತಿಮ ವಿಧಿ– ವಿಧಾನ ನೆರವೇರಿಸಿದ್ದಾರೆ.

**

ಕರ್ನಾಟಕ ಸರ್ಕಾರವು ಸಕಷ್ಟದಲ್ಲಿರುವ ದೆಹಲಿ ಕನ್ನಡಿಗರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಭವನದ ಅಧಿಕಾರಿ, ಸಿಬ್ಬಂದಿಯ ನೆರವು ಪಡೆದು ಸಹಾಯವಾಣಿ ಕೇಂದ್ರ ಆರಂಭಿಸಬೇಕು.
–ಸಿ.ಎಂ. ನಾಗರಾಜ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.