ADVERTISEMENT

ದೆಹಲಿ | ರೈತರ ಪ್ರತಿಭಟನಾ ಸ್ಥಳದಲ್ಲಿ ಅನುಚಿತ ವರ್ತನೆ ಆರೋಪ: ಪತ್ರಕರ್ತನ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 8:51 IST
Last Updated 31 ಜನವರಿ 2021, 8:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು (ಹರಿಯಾಣ–ದೆಹಲಿ) ಗಡಿ ಪ್ರದೇಶದಲ್ಲಿ ಪೊಲೀಸ್‌ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪತ್ರಕರ್ತ ಮನದೀಪ್‌ ಪೂನಿಯಾ ಎನ್ನುವವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪೂನಿಯಾ ಅವರನ್ನುಶನಿವಾರ ರಾತ್ರಿ ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್‌ 186 (ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ) ಮತ್ತು ಸೆಕ್ಷನ್‌ 353 (ಕರ್ತವ್ಯದಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಲಿಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಬೇಕು ಎಂದು ಸ್ಥಳೀಯರು ಶುಕ್ರವಾರ ಒತ್ತಾಯಿಸಿದ್ದರು. ಈ ವೇಳೆ ರೈತರು ಮತ್ತು ಸ್ಥಳೀಯರ ನಡುವೆ ನಡೆದ ಘರ್ಷಣೆಯಲ್ಲಿ ಅಲಿಪುರ ಠಾಣಾಧಿಕಾರಿ ಪ್ರದೀಪ್‌ ಪಾಲಿವಾಲ್‌ ಗಾಯಗೊಂಡಿದ್ದರು.

ADVERTISEMENT

ಸದ್ಯ ಸ್ಥಳದಲ್ಲಿ ಪ್ರತಿಭಟನೆ ಮುಂದುವರಿದಿದ್ದು ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಾಯಕರು ಫೆಬ್ರುವರಿ 2ರಂದು ಸಭೆ ಸೇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.