ADVERTISEMENT

ಅದಾನಿ ವಿವಾದ: ವಿಪಕ್ಷಗಳ ಪ್ರತಿಭಟನಾ ಮೆರವಣಿಗೆ ತಡೆದ ಪೊಲೀಸ‌ರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 9:48 IST
Last Updated 15 ಮಾರ್ಚ್ 2023, 9:48 IST
   

ನವದೆಹಲಿ: ಅದಾನಿ ಸಮೂಹದ ಮೇಲಿನ ವಂಚನೆ ಆರೋಪಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಸಂಸತ್ ಭವನದಿಂದ ಜಾರಿ ನಿರ್ದೇಶನಾಲಯದವರೆಗೆ ಇಂದು ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ಬ್ಯಾರಿಕೇಡ್‌ಗಳನ್ನು ರಚಿಸಿ ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಬುಧವಾರ ಮಧ್ಯಾಹ್ನ 18 ಪಕ್ಷಗಳ ನಾಯಕರು ಒಟ್ಟಾಗಿ ಸಂಸತ್ ಭವನದಿಂದ ಜಾರಿ ನಿರ್ದೇಶನಾಲಯದತ್ತ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. ಮೆರವಣಿಗೆಗೆ ಮುಂಚಿತವಾಗಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ದೆಹಲಿ ಪೊಲೀಸರು, ಪ್ರತಿಭಟನಾಕಾರರನ್ನು ಇಡಿ ಕಚೇರಿಗೆ ತೆರಳದಂತೆ ತಡೆಯಲು ಬೃಹತ್ ತುಕಡಿಯನ್ನು ನಿಯೋಜಿಸಿದ್ದರು.


ಅದಾನಿ ಸಮೂಹವು ಕೃತಕವಾಗಿ ಷೇರುಗಳ ಬೆಲೆ ಏರಿಳಿತ ಮಾಡುವ ಮೂಲಕ ಖರೀದಿದಾರರನ್ನು ವಂಚಿಸಿತ್ತು ಎಂಬ ಕುರಿತು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ರಿಸರ್ಚ್‌ ವರದಿಯ ಬಳಿಕ ಕಂಪನಿಯ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಈ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ADVERTISEMENT


ಪೊಲೀಸರು ರಚಿಸಿದ ವ್ಯೂಹ ದಾಟಿ ಮುಂದೆ ಸಾಗಲು ಸಾಧ್ಯವಾಗದ ವಿಪಕ್ಷಗಳ ನಾಯಕರು ಪ್ರತಿಭಟನೆ ಕೈಬಿಟ್ಟು ಸಂಸತ್ತಿಗೆ ಮರಳಿದರು. ‘ನಮ್ಮನ್ನು ಇಡಿ ಕಚೇರಿ ತಲುಪದಂತೆ ತಡೆಯಲಾಗಿದೆ. ನಾವು 200 ಜನರಿದ್ದು, ಕನಿಷ್ಟ 2000 ಪೊಲೀಸರಿದ್ದರು. ಸರ್ಕಾರ ನಮ್ಮ ಧ್ವನಿ ಹತ್ತಿಕ್ಕಲು ಬಯಸಿದೆ. ಆದರೆ ಸಂಸತ್ತಿನಲ್ಲಿ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.


ರಾಹುಲ್‌ ಗಾಂಧಿ ಲಂಡನ್‌ ಭಾಷಣ ಉಲ್ಲೇಖಿಸಿ, ‘ಯಾರಾದರೂ ಈ ಸಂಗತಿಗಳನ್ನು ಚರ್ಚೆ, ಸೆಮಿನಾರ್‌ಗಳಲ್ಲಿ ಹೇಳಿದರೆ, ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯಲಾಗುತ್ತದೆ’ ಎಂದು ಕೇಂದ್ರದ ವಿರುದ್ಧ ಖರ್ಗೆ ಕಿಡಿಕಾರಿದರು.


ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿಯ ಶರದ್‌ ಪವಾರ್‌ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.