ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಾಂಗ್ಲಾದೇಶದ 175 ಮಂದಿ ವಲಸಿಗರು ಅಕ್ರಮವಾಗಿ ವಾಸ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ನಗರದ ಹೊರವಲಯದಲ್ಲಿ ಶನಿವಾರ ಸಂಜೆ 6 ಗಂಟೆಗೆ ಪ್ರಾರಂಭವಾದ ಕಾರ್ಯಾಚರಣೆ ಒಟ್ಟು 12 ಗಂಟೆ ನಡೆಯಿತು. ಈ ವೇಳೆ ಬಾಂಗ್ಲಾದೇಶದ 175 ಮಂದಿ ಅಕ್ರಮ ವಲಸಿಗರನ್ನು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೆಹಲಿಯಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯು, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಆಯುಕ್ತರಿಗೆ ಡಿ.11ರಂದು ನಿರ್ದೇಶನ ನೀಡಿತು. ಇದರ ಬೆನ್ನಲ್ಲೇ ದಾಖಲೆಗಳು ಇಲ್ಲದೇ ವಾಸಿಸುತ್ತಿರುವ ಜನರನ್ನು ಗುರುತಿಸುವ ಮತ್ತು ಗಡೀಪಾರು ಮಾಡುವ ವಿಶೇಷ ಕಾರ್ಯಾಚರಣೆಯನ್ನು ದೆಹಲಿ ಪೊಲೀಸರು ಆರಂಭಿಸಿದ್ದಾರೆ.
ಶಂಕಿತ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಅವರನ್ನು ವಾಪಸ್ ಕಳುಹಿಸುವ ಉಪಕ್ರಮ ಇದಾಗಿದ್ದು, ಇದಕ್ಕಾಗಿ ಮನೆ ಮನೆಗೆ ತೆರಳಿ ತಪಾಸಣೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾರ್ಯಾಚರಣೆ ವೇಳೆ ಶಂಕಿತರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.