ADVERTISEMENT

ದೆಹಲಿ ಹಿಂಸಾಚಾರ ಪ್ರಕರಣ| ಆರೋಪಿಗಳನ್ನು ಕೆಂಪುಕೋಟೆಗೆ ಕರೆದೊಯ್ದ ಪೊಲೀಸರು

ದೆಹಲಿ ಹಿಂಸಾಚಾರ ಪ್ರಕರಣ

ಪಿಟಿಐ
Published 13 ಫೆಬ್ರುವರಿ 2021, 15:26 IST
Last Updated 13 ಫೆಬ್ರುವರಿ 2021, 15:26 IST
ಪೊಲೀಸರ ವಶದಲ್ಲಿರುವ ಸಿಧು
ಪೊಲೀಸರ ವಶದಲ್ಲಿರುವ ಸಿಧು    

ನವದೆಹಲಿ: ದೆಹಲಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಗಳಾದ ನಟ, ಸಾಮಾಜಿಕ ಹೋರಾಟಗಾರ ದೀಪ್‌ ಸಿಧು ಮತ್ತು ಇಕ್ಬಾಲ್‌ ಸಿಂಗ್‌ ಅವರನ್ನು ಪೊಲೀಸರು ಶನಿವಾರ ಘಟನಾ ಸ್ಥಳ ಕೆಂಪುಕೋಟೆಗೆ ಕರೆದೊಯ್ದು ವಿಚಾರಣೆ ನಡೆಸಿದರು.

ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದ ಘಟನೆಗಳ ದೃಶ್ಯವನ್ನು ಮರುಸೃಷ್ಟಿಸಲು ಮತ್ತು ತನಿಖೆ ನಡೆಸಲು ಬಂಧಿತ ಆರೋಪಿಗಳನ್ನು ಅಪರಾಧ ವಿಭಾಗದ ಪೊಲೀಸ್‌ ತಂಡವು ಕೆಂಪು ಕೋಟೆಗೆ ಕರೆದೊಯ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜ.26ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರದ ಹಿಂದೆ ಸಿಧು ಪ್ರಮುಖ ಪಾತ್ರ ವಹಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಆರೋಪಿ ಸಿಧು ಅವರನ್ನು ಹರಿಯಾಣದ ಕರ್ನಲ್ ಬಳಿ ದೆಹಲಿ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದರು. ಮತ್ತೊಬ್ಬ ಪ್ರಮುಖ ಆರೋಪಿ ಇಕ್ಬಾಲ್ ಸಿಂಗ್ ಎಂಬಾತನನ್ನು ಮಂಗಳವಾರ ರಾತ್ರಿ ಪಂಜಾಬ್‌ನ ಹೋಸಿಯಾರ್‌ಪುರ ಬಳಿ ಬಂಧಿಸಲಾಗಿತ್ತು. ಇನ್ನೊಬ್ಬ ಆರೋಪಿ ಸುಖ್‌ದೇವ್‌ ಸಿಂಗ್‌ನನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ಜನವರಿ.26ರಂದು ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು.

ಟಿಕ್ರಿ ಗಡಿಯಲ್ಲಿ ಪೊಲೀಸ್‌ ಮೇಲೆ ಹಲ್ಲೆ

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿರುವಟಿಕ್ರಿ ಗಡಿಯಲ್ಲಿ ‌ಶನಿವಾರಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರ ಮೇಲೆ ಹಲ್ಲೆ ನಡೆದಿದೆ.

ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ರೈತರ ಬಗ್ಗೆ ಭಿತ್ತಪತ್ರ ಅಂಟಿಸಲು ಹೋಗಿದ್ದ ವೇಳೆ ಈ ಹಲ್ಲೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.