ನವದೆಹಲಿ: ದೆಹಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ‘ಪರಿವರ್ತನ್’ ಎಂಬ ಶೀರ್ಷಿಕೆಯಡಿ 26 ವರ್ಷಗಳ ನಂತರ ಅಧಿಕಾರಕ್ಕೆ ಮರಳಲು ಬಿಜೆಪಿ ಪಣ ತೊಟ್ಟಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೇ ತನ್ನ ಅಸ್ತ್ರವನ್ನಾಗಿಸಿ ಪ್ರಚಾರ ಆರಂಭಿಸಿದೆ.
ಈ ಹಿಂದೆ 1993ರ ಡಿ. 2ರಂದು ಅಧಿಕಾರಕ್ಕೆ ಬಂದ ಬಿಜೆಪಿ, 1998ರ ಡಿ. 3ರಂದು ಕೆಳಗಿಳಿಯಿತು. ಈ ಅವಧಿಯಲ್ಲಿ ಮದನ್‌ಲಾಲ್ ಖುರಾನಾ, ಸಾಹೀಬ್ ಸಿಂಗ್ ವರ್ಮಾ ಹಾಗೂ ಸುಷ್ಮಾ ಸ್ವರಾಜ್ ಮೂವರು ಮುಖ್ಯಮಂತ್ರಿಗಳನ್ನು ಕಂಡಿತು.
ಈ ಬಾರಿ ಅಧಿಕಾರ ಪಡೆಯಲು ಹವಣಿಸುತ್ತಿರುವ ಬಿಜೆಪಿ ಆಡಳಿತಾರೂಢ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಫೆ. 5ರಂದು ಚುನಾವಣೆ ನಡೆಯಲಿರುವ ದೆಹಲಿಯಲ್ಲಿ ಎಎಪಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. 70 ಕ್ಷೇತ್ರಗಳಿಗೂ ಎಎಪಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. 2013ರಿಂದ ಅಧಿಕಾರದಲ್ಲಿರುವ ಎಎಪಿಯ 2 ಅವಧಿಗೆ ಅರವಿಂದ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದರು. 2ನೇ ಅವಧಿ ಕೊನೆಯಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿದರೂ, ಅಧಿಕಾರದಲ್ಲಿ ಮುಂದುವರಿದರು. ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನವನ್ನು ಆತಿಶಿಗೆ ಬಿಟ್ಟುಕೊಟ್ಟರು. ಕೇಜ್ರಿವಾಲ್ ಅವರು ಈ ಬಾರಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ಈವರೆಗೂ 48 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ 29 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಬಕಾರಿ ನೀತಿ ಹಗರಣ ರಾಷ್ಟ್ರವ್ಯಾಪಿ ಸುದ್ದಿಯಾಗಿರುವುದರಿಂದ ಈ ಬಾರಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಜತೆಗೆ 26 ವರ್ಷಗಳ ಕಾಲ ಅಧಿಕಾರದಿಂದ ದೂರವಿರುವ ಅನುಕಂಪವನ್ನೂ ಬಳಸಿಕೊಳ್ಳುವ ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ ಮಹಿಳೆಯರಿಗೆ ಮಾಸಿಕ ₹2,100 ಗೌರವಧನ ನೀಡುವ ಹಾಗೂ ಇನ್ನಿತರ ಯೋಜನೆಗಳೊಂದಿಗೆ ಎಎಪಿ ಮತದಾರರ ಸೆಳೆಯುವ ತಂತ್ರ ಹೂಡಿದೆ. ಆ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕೆ ಸಜ್ಜಾಗಿದೆ. ‘ಫಿರ್ ಲಾಯೇಂಗೆ ಕೇಜ್ರಿವಾಲ್’ ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಚಾರ ಆರಂಭಿಸಿದೆ. ಇದರ ನಡುವೆ ಕೇಂದ್ರ ಹಾಗೂ ದೆಹಲಿ ಸರ್ಕಾರದ ನಡುವಿನ ಗುದ್ದಾಟಗಳೂ ಈ ಚುನಾವಣೆಯಲ್ಲಿ ವ್ಯಾಪಕವಾಗಿ ಚರ್ಚೆಯಾಗಲಿವೆ.
ಮತ್ತೊಂದೆಡೆ 1998ರಿಂದ 2013ರವರೆಗೂ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಎಎಪಿ ಮತ್ತು ಬಿಜೆಪಿ ಸಮಾನ ಪ್ರತಿಸ್ಪರ್ಧಿ ಪಕ್ಷಗಳಾಗಿವೆ. ಈ ಬಾರಿ ಸಾಕಷ್ಟು ಯೋಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್, ‘ಪ್ಯಾರಿ ದೀದಿ’ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹2,500 ನೀಡುವುದಾಗಿ ಘೋಷಿಸಿದೆ.
2012ರಲ್ಲಿ ಅಸ್ತಿತ್ವಕ್ಕೆ ಬಂದ ಎಎಪಿ 2013ರಲ್ಲಿ ಅಧಿಕಾರಕ್ಕೇರಿತು. ಒಟ್ಟು 70 ಕ್ಷೇತ್ರಗಳಲ್ಲಿ ಎಎಪಿ ಒಟ್ಟು ಮತಗಳಿಕೆಯ ಪ್ರಮಾಣ ಶೇ 29.5ರೊಂದಿಗೆ 28 ಕ್ಷೇತ್ರಗಳನ್ನು ಗೆದ್ದಿತ್ತು. 32 ಕ್ಷೇತ್ರ ಗೆದ್ದಿದ್ದ ಬಿಜೆಪಿ ಶೇ 32.2ರಷ್ಟು ಹಾಗೂ 8 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಶೇ 24.6ರಷ್ಟು ಮತಗಳಿಸಿದ್ದವು.
ಮುಂದಿನ ಚುನಾವಣೆಯಲ್ಲಿ ಎಎಪಿ ಶೇ 54.3ರಷ್ಟು ಮತಗಳೊಂದಿಗೆ 67 ಕ್ಷೇತ್ರಗಳಲ್ಲಿ ಗೆದ್ದಿತು. ಬಿಜೆಪಿ ಕೇವಲ 3 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಿತು. 2020ರ ಚುನಾವಣೆಯಲ್ಲೂ ಎಎಪಿ ಗೆಲುವಿನ ಯಾತ್ರೆ ಮುಂದುವರಿಯಿತು. 62 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು. ಈ ಬಾರಿ ಬಿಜೆಪಿ 8 ಕ್ಷೇತ್ರಗಳಲ್ಲಿ ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.