ADVERTISEMENT

ದೆಹಲಿ ವಿಧಾನಸಭಾ ಚುನಾವಣೆ: 70 ಅಭ್ಯರ್ಥಿಗಳ ಘೋಷಿಸಿದ ಎಎಪಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 14:32 IST
Last Updated 15 ಡಿಸೆಂಬರ್ 2024, 14:32 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ವಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಿದ್ಧತೆಯನ್ನು ಚುರುಕುಗೊಳಿಸಿದ್ದು, ಅಭ್ಯರ್ಥಿಗಳ ಘೋಷಣೆಯೂ ಮುಂದುವರಿದಿದೆ.

ಹೊಸ ಸರ್ಕಾರದ ಆಯ್ಕೆಗೆ ಎರಡು ತಿಂಗಳಷ್ಟು ಬಾಕಿ ಇದೆಯಾದರೂ, ರಾಷ್ಟ್ರ ರಾಜಧಾನಿಯಲ್ಲಿ ಚಳಿ ನಡುವೆ ಈಗಾಗಲೇ ಚುನಾವಣೆಯ ಕಾವು ಏರತೊಡಗಿದೆ.

ಮಹತ್ವದ ಬೆಳವಣಿಗೆಯಲ್ಲಿ, ದೆಹಲಿಯ ಎಲ್ಲ 70 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಎಎಪಿ ಘೋಷಿಸಿದೆ. ಈ ಮೂಲಕ, ಕಾಂಗ್ರೆಸ್‌ ಜತೆ ಮೈತ್ರಿ ಕುರಿತು ಹಬ್ಬಿದ್ದ ಊಹಾಪೋಹಗಳಿಗೆ ತೆರೆ ಎಳೆದಿದೆ.

ADVERTISEMENT

ಎಎಪಿ, 38 ಅಭ್ಯರ್ಥಿಗಳ ಹೆಸರು ಇರುವ ನಾಲ್ಕನೇ ಮತ್ತು ಕೊನೆಯ ಪಟ್ಟಿಯನ್ನು ಘೋಷಿಸಿದೆ. ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ನವದೆಹಲಿ ಕ್ಷೇತ್ರದಿಂದ ಪುನರಾಯ್ಕೆ ಬಯಸಿದ್ದರೆ, ಮುಖ್ಯಮಂತ್ರಿ ಆತಿಶಿ ಅವರು ಕಾಲ್ಕಾಜಿ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

21 ಹಾಲಿ ಶಾಸಕರಿಗೆ ಮಣೆ ಹಾಕಿದೆ. ಮೂರು ಕ್ಷೇತ್ರಗಳ ಶಾಸಕರು ಪಕ್ಷ ತೊರೆದಿರುವ ಕಾರಣ, ಅಲ್ಲಿ ಹೊಸಬರಿಗೆ ಟಿಕೆಟ್‌ ನೀಡಿದೆ. ಕೆಲ ಶಾಸಕರ ಬದಲಾಗಿ ಅವರ ಕುಟುಂಬ ಸದಸ್ಯರಿಗೆ ಕಣಕ್ಕಿಳಿಸಿರುವ ಎಎಪಿ, 10–12 ಜನ ಪಕ್ಷಾಂತರಿಗಳಿಗೂ ಟಿಕೆಟ್‌ ನೀಡಿದೆ. ಆತಿಶಿ ನೇತೃತ್ವದ ಸರ್ಕಾರದ ಎಲ್ಲ ಸಚಿವರು ಅವರ ಕ್ಷೇತ್ರಗಳಿಂದಲೇ ಸ್ಪರ್ಧಿಸುತ್ತಿದ್ಧಾರೆ.

ಬಿಜೆಪಿ ಟಿಕೆಟ್‌ ಘೋಷಣೆ ವಿಳಂಬ: 

ಸಾಮಾನ್ಯವಾಗಿ ಎಲ್ಲ ಪಕ್ಷಗಳಿಗಿಂತಲೂ ಅಭ್ಯರ್ಥಿಗಳ ಹೆಸರುಗಳನ್ನು ಮೊದಲೇ ಘೋಷಿಸುವ ಬಿಜೆಪಿ, ಈ ಬಾರಿ ವಿಳಂಬ ತಂತ್ರಕ್ಕೆ ಮೊರೆ ಹೋದಂತಿದೆ. ಡಿ.8ರಂದು ಆರಂಭಿಸಬೇಕಿದ್ದ ‘ಪರಿವರ್ತನಾ ಯಾತ್ರೆ’ಯನ್ನೂ ಬಿಜೆಪಿ ಮುಂದೂಡಿತ್ತು. 

ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ, ಮಾಜಿ ಸಂಸದರಾದ ಪರ್ವೇಶ್‌ ವರ್ಮಾ ಮತ್ತು ರಮೇಶ ಬಿಧೂಡಿ ಅವರನ್ನು ಬಿಜೆಪಿ ಕಣಕ್ಕಿಳಿಸಲಿದೆ ಎಂದೇ ಹೇಳಲಾಗುತ್ತಿದೆ. ಈ ನಾಯಕರು ಈಗಾಗಲೇ ದೆಹಲಿಯ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ಚುನಾವಣಾ ಸಿದ್ಧತೆಯಲ್ಲಿ ತೊಡಗಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಿಂದ ಪರಾವಭವಗೊಂಡಿರುವ ಸ್ಮೃತಿ ಇರಾನಿ ಅವರು, ಬಿಜೆಪಿಯ ದೆಹಲಿ ಘಟಕದ ಹಿರಿಯ ನಾಯಕರಾದ ವಿ.ಕೆ.ಮಲ್ಹೋತ್ರ ಹಾಗೂ ವಿಜಯ್‌ ಗೋಯಲ್ ಅವರನ್ನು ಭೇಟಿ ಮಾಡಿದ್ದು, ಈ ಇಬ್ಬರು ನಾಯಕರ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದ್ಧಾರೆ.

21 ಅಭ್ಯರ್ಥಿಗಳ ಘೋಷಿಸಿದ ಕಾಂಗ್ರೆಸ್‌:

ಇತ್ತೀಚೆಗೆ ತಾನು ಕೈಗೊಂಡಿದ್ದ ‘ದೆಹಲಿ ನ್ಯಾಯ ಯಾತ್ರಾ’ ನೆಚ್ಚಿಕೊಂಡಂತಿರುವ ಕಾಂಗ್ರೆಸ್‌, 21 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದೆ.

ಸಂದೀಪ್‌ ದೀಕ್ಷಿತ್‌, ಕಾಂಗ್ರೆಸ್‌ನ ದೆಹಲಿ ಘಟಕದ ಮುಖ್ಯಸ್ಥ ದೇವೇಂದ್ರ ಯಾದವ್ ಪ್ರಮುಖ ಹೆಸರುಗಳಾಗಿವೆ.

2020ರಲ್ಲಿ ನಡೆದ ಚುನಾವಣೆಯಲ್ಲಿ, ಎಎಪಿ 70ರ ಪೈಕಿ 62 ಸ್ಥಾನಗಳಲ್ಲಿ ಗೆದ್ದು, ರಾಷ್ಟ್ರ ರಾಜಧಾನಿ ರಾಜಕೀಯದಲ್ಲಿ ತನ್ನ ಪ್ರಾಬಲ್ಯ ಸಾಬೀತು ಮಾಡಿತ್ತು.

ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಟೀಕೆ

‘ಎಎಪಿ ಸಂಪೂರ್ಣ ವಿಶ್ವಾಸ ಮತ್ತು ಸಿದ್ಧತೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಆದರೆ ಬಿಜೆಪಿ ಇನ್ನೂ ಪಟ್ಟಿ  ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನೂ ಘೋಷಿಸಿಲ್ಲ’ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ‘ದೆಹಲಿ ಅಭಿವೃದ್ಧಿ ಕುರಿತಂತೆ ಬಿಜೆಪಿ ಯೋಜನೆ ಹೊಂದಿಲ್ಲ. ಅವರಿಗೆ ದೂರದೃಷ್ಟಿಯೂ ಇಲ್ಲ. ಕೇಜ್ರಿವಾಲ್‌ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದೇ ಬಿಜೆಪಿಯವರ ಗುರಿ. ಇದೇ ಅವರ ಏಕೈಕ ನೀತಿ– ಏಕೈಕ ಘೋಷಣೆ ಹಾಗೂ ಏಕೈಕ ಕಾರ್ಯಕ್ರಮ’ ಎಂದು ‘ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೇಜ್ರಿವಾಲ್‌ ವಿರುದ್ಧ ಮಾಜಿ ಮುಖ್ಯಮಂತ್ರಿಗಳ ಪುತ್ರರು!

ಬಿಜೆಪಿಯು ನವದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್‌ ವಿರುದ್ಧ ಪರ್ವೇಶ್‌ ವರ್ಮಾ ಅವರನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ. ಪರ್ವೇಶ್ ಅವರು ದೆಹಲಿ ಮಾಜಿ ಮುಖ್ಯಮಂತ್ರಿ ಸಾಹಿಬ್‌ ಸಿಂಗ್‌ ವರ್ಮಾ ಪುತ್ರ. ಈ ಕ್ಷೇತ್ರದಲ್ಲಿ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಪುತ್ರ ಮಾಜಿ ಸಂಸದ ಸಂದೀಪ್‌ ದೀಕ್ಷಿತ್ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.