ADVERTISEMENT

ದೆಹಲಿ ಗಲಭೆ: ಸೆ.19ಕ್ಕೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 15:46 IST
Last Updated 12 ಸೆಪ್ಟೆಂಬರ್ 2025, 15:46 IST
   

ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಆರೋಪ ಪ್ರಕರಣದಲ್ಲಿ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರರಾದ ಉಮರ್ ಖಾಲಿದ್‌, ಶಾರ್ಜೀಲ್‌ ಇಮಾಮ್‌, ಗುಲ್ಫಿಶಾ ಫಾತಿಮಾ ಮತ್ತು ಮೀರನ್‌ ಹೈದರ್‌ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ 19ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಮತ್ತು ಎನ್‌.ವಿ.ಅಂಜಾರಿಯಾ ಅವರನ್ನು ಒಳಗೊಂಡ ನ್ಯಾಯಪೀಠವು ಶುಕ್ರವಾರ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ತಡವಾಗಿ ಸ್ವೀಕರಿಸಿತು.

ಜಾಮೀನು ನಿರಾಕರಿಸಿದ್ದ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಖಾಲಿದ್‌ ಸೇರಿ ಒಂಬತ್ತು ಮಂದಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ADVERTISEMENT

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಖಾಲಿದ್ ಸೇರಿ ಇತರೆ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ)ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. 2020ರಿಂದಲೂ ಜೈಲಿನಲ್ಲಿರುವ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.

ಎಫ್‌ಐಆರ್‌ ಒಂದು ಜೋಕ್‌: ಉಮರ್‌ ಖಾಲಿದ್‌

ದೆಹಲಿ ಗಲಭೆ ಪಿತೂರಿ ಆರೋಪದಲ್ಲಿ ತಮ್ಮ ವಿರುದ್ಧ ದೋಷಾರೋಪ ನಿಗದಿ ಮಾಡಿರುವ ರೀತಿಗೆ ಸಾಮಾಜಿಕ ಹೋರಾಟಗಾರ ಉಮರ್‌ ಖಾಲಿದ್‌ ಅವರು ಗುರುವಾರ ವಿರೋಧ ವ್ಯಕ್ತಪಡಿಸಿದರು. ‘ದೆಹಲಿ ಪೊಲೀಸ್‌ ದಾಖಲಿಸಿರುವ ಎಫ್‌ಐಆರ್‌ ಒಂದು ಜೋಕ್‌. ಇದರಿಂದಾಗಿ ಐದು ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಅವರು ದೆಹಲಿ ಕೋರ್ಟ್‌ಗೆ ತಿಳಿಸಿದರು. ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿರುವುದಾಗಿ ಅವರು ಆರೋಪಿಸಿದರು. ದೋಷಾರೋಪ ನಿಗದಿಗೆ ಸಂಬಂಧಿಸಿದ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾದೀಶ ಸಮೀರ್‌ ಬಾಜಪೈ ಅವರು ವಿಚಾರಣೆ ನಡೆಸಿದರು. ವಾದ–ವಿವಾದ ಆಲಿಸಿದ ನಂತರ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್‌ 17ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.