ADVERTISEMENT

ದೆಹಲಿಗೆ ಮತ್ತೆ ಮಹಿಳಾ ಸಾರಥ್ಯ: ನೂತನ ಸಿಎಂ ಆಗಿ ರೇಖಾ ಗುಪ್ತಾ ಇಂದು ಪ್ರಮಾಣವಚನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 23:57 IST
Last Updated 19 ಫೆಬ್ರುವರಿ 2025, 23:57 IST
<div class="paragraphs"><p>ರೇಖಾ ಗುಪ್ತಾ  </p></div>

ರೇಖಾ ಗುಪ್ತಾ

   

ನವದೆಹಲಿ: ಶಾಲಿಮಾರ್ ಬಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರು ದೆಹಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕಿಯಾಗಿ ಬುಧವಾರ ರಾತ್ರಿ ಆಯ್ಕೆಯಾಗಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

32 ವರ್ಷಗಳ ವಿಧಾನಸಭಾ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ನಾಲ್ಕನೇ ಮಹಿಳೆ ಅವರು. ಬಿಜೆಪಿಯ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ ಹಾಗೂ ಎಎಪಿಯ ಆತಿಶಿ ಅವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದರು. ಗುರುವಾರ ಮಧ್ಯಾಹ್ನದ ಸುಮಾರಿಗೆ ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಆರು ಸಚಿವರು ಸಹ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ADVERTISEMENT

ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿಲ್ಲ. ಈ ಕೊರತೆಯನ್ನು ನೀಗಿಸಲು ಅಚ್ಚರಿ ಆಯ್ಕೆ ರೂಪದಲ್ಲಿ ರೇಖಾ ಅವರನ್ನು ದೆಹಲಿಯ ನೂತನ ಸಾರಥಿಯಾಗಿ ಬಿಜೆಪಿ ಆಯ್ಕೆ ಮಾಡಿದೆ. 

ರಾಜಸ್ಥಾನದಲ್ಲಿ 2018ರಲ್ಲಿ ಅಧಿಕಾರ ತ್ಯಜಿಸಿದ ವಸುಂಧರಾ ರಾಜೇ ಸಿಂಧಿಯಾ ನಂತರ ಗುಪ್ತಾ ಅವರು ಪಕ್ಷದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಪಕ್ಷವು ಪ್ರಸ್ತುತ 19 ರಾಜ್ಯಗಳಲ್ಲಿ ಎನ್‌ಡಿಎ ಮಿತ್ರಪಕ್ಷಗಳೊಂದಿಗೆ ಅಧಿಕಾರದಲ್ಲಿದೆ. 13 ರಾಜ್ಯಗಳಲ್ಲಿ ಬಿಜೆಪಿಯ ಮುಖ್ಯಮಂತ್ರಿಗಳಿದ್ದಾರೆ. 

ಆದಾಗ್ಯೂ, ಕಳೆದ ವರ್ಷ ಒಡಿಶಾ ಮತ್ತು ರಾಜಸ್ಥಾನದಲ್ಲಿ ಪಕ್ಷವು ಪಾರ್ವತಿ ಪರಿದಾ ಹಾಗೂ ದಿಯಾ ಕುಮಾರಿ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಿಸುವ ಮೂಲಕ ಈ ಅಸಮತೋಲನವನ್ನು ಸರಿಪಡಿಸಲು ಪ್ರಯತ್ನಿಸಿತ್ತು. 

ಪಕ್ಷದ ಕೇಂದ್ರ ವೀಕ್ಷಕರಾದ ರವಿಶಂಕರ್ ಪ್ರಸಾದ್‌ ಹಾಗೂ ಒ.ಪಿ.ಧನಕರ್‌ ಸಮ್ಮುಖದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಹೆಸರನ್ನು ಘೋಷಿಸಲಾಯಿತು. ಸಭೆಯಲ್ಲಿ ಪಕ್ಷದ 48 ಶಾಸಕರು ಭಾಗವಹಿಸಿದ್ದರು. 

ರಾಜ್ಯದಲ್ಲಿ 1993ರಿಂದ 1998ರ ವರೆಗೆ ಬಿಜೆಪಿ ಸರ್ಕಾರವಿತ್ತು. ಆ ಬಳಿಕ 26 ವರ್ಷಗಳ ಕಾಲ ಪಕ್ಷಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿರಲಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ಪಕ್ಷವು ಅಭೂತಪೂರ್ವ ಜಯ ಗಳಿಸಿತ್ತು.

ಬಿಜೆಪಿ ಆಡಳಿತವಿರುವ ನೆರೆಯ ಹರಿಯಾಣದಲ್ಲಿ ಒಬಿಸಿ (ನಯಾಬ್ ಸಿಂಗ್‌ ಸೈನಿ), ಉತ್ತರ ಪ್ರದೇಶದಲ್ಲಿ ಠಾಕೂರ್‌ (ಯೋಗಿ ಆದಿತ್ಯನಾಥ) ಮತ್ತು ರಾಜಸ್ಥಾನದಲ್ಲಿ ಬ್ರಾಹ್ಮಣ (ಭಜನ್‌ಲಾಲ್‌ ಶರ್ಮಾ) ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದರೆ, ದೆಹಲಿಯಲ್ಲಿ ವ್ಯಾಪಾರಿ ಸಮುದಾಯದ ಮಹಿಳೆಗೆ ಪ್ರಾತಿನಿಧ್ಯ ನೀಡಿದೆ. ಮಹಿಳಾ ಸಬಲೀಕರಣದ ಹಲವು ಯೋಜನೆಗಳನ್ನು ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಗುರುವಾರ ನಡೆಯುವ ಮೊದಲ ಸಂಪುಟ ಸಭೆಯಲ್ಲಿ ಕೆಲವೊಂದು ಯೋಜನೆಗಳನ್ನು ಘೋಷಿಸುವ ಹಾಗೂ ಎಎಪಿ ಯೋಜನೆಗಳ ಮರು ನಾಮಕರಣ ಮಾಡುವ ಸಂಭವ ಇದೆ. 

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಂಪುಟದ ಸಚಿವರು, ಬಿಜೆಪಿಯ ಮುಖ್ಯಮಂತ್ರಿಗಳು, ಎನ್‌ಡಿಎ ಮೈತ್ರಿಕೂಟದ ನಾಯಕರು ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 50 ಸಾವಿರ ಜನರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಕ್ಷವು ಆಟೋ ಚಾಲಕರು, ಕೊಳೆಗೇರಿ ನಿವಾಸಿಗಳು ಮತ್ತು ಕೇಂದ್ರ ಯೋಜನೆಗಳ ಫಲಾನುಭವಿಗಳಿಗೆ ವಿಶೇಷ ಆಹ್ವಾನ ನೀಡಿದೆ. 

ನವದೆಹಲಿಯಲ್ಲಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಮಣಿಸಿದ್ದ ಪರ್ವೇಶ್‌ ವರ್ಮಾ, ನಾಯಕರಾದ ವಿಜೇಂದರ್‌ ಗುಪ್ತ, ಅಶೀಶ್ ಸೂದ್‌, ಸತೀಶ್‌ ಉಪಾಧ್ಯಾಯ ಹಾಗೂ ಶಿಖಾ ರಾಯ್ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.