ADVERTISEMENT

ಸೋಂಕಿತರು ಮನೆಯಲ್ಲಿದ್ದಂತೆಯೇ ಚಿಕಿತ್ಸೆ: ಡೆಲಾಯ್ಟ್‌ ಕಂಪನಿಯಿಂದ ಹೊಸ ಕಾರ್ಯಕ್ರಮ

ಹರಿಯಾಣದ ಕರ್ನಲ್‌ ಜಿಲ್ಲೆಯಲ್ಲಿ ಜಾರಿ

ಪಿಟಿಐ
Published 25 ಮೇ 2021, 11:26 IST
Last Updated 25 ಮೇ 2021, 11:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೋವಿಡ್‌–19ನ ಅಲ್ಪ ಅಥವಾ ಸಾಧಾರಣ ಮಟ್ಟದ ಲಕ್ಷಣಗಳು ಕಂಡುಬಂದ ಕೂಡಲೇ ಮನೆಯಲ್ಲಿ ಇರುವಂತೆಯೇ ವರ್ಚುವಲ್‌ ಸ್ವರೂಪದಲ್ಲಿ ಆರೋಗ್ಯ ಸೇವೆಯನ್ನು ನೀಡಲು ಅನುವಾಗುವಂತಹ ಸರಳ ಹಾಗೂ ನವೀನವಾದ ಕಾರ್ಯಕ್ರಮವನ್ನು ಡೆಲಾಯ್ಟ್‌ ಕಂಪನಿ ಅಭಿವೃದ್ಧಿಪಡಿಸಿದೆ.

ಹರಿಯಾಣದ ಕರ್ನಲ್‌ ಜಿಲ್ಲೆಯಲ್ಲಿ ಇದನ್ನು ಆಧರಿಸಿದ ‘ಸಂಜೀವಿನಿ ಪರಿಯೋಜನಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕಂಪನಿ ಸಿಇಒ ಪುನೀತ್‌ ರೆಂಜೆನ್ ಅವರು, ‘ರೋಗಿಗಳಿಗೆ ಅಲ್ಪಾವಧಿಯಲ್ಲಿ ಆರೋಗ್ಯ ಆರೈಕೆ ಸೇವೆಯನ್ನು ಒದಗಿಸಲು ಈ ಕಾರ್ಯಕ್ರಮ ಸಹಕಾರಿ’ ಎಂದು ಹೇಳಿದರು.

ಕಾರ್ಯಕ್ರಮದಡಿ ಇಡೀ ನಿರ್ವಹಣೆ ವ್ಯವಸ್ಥೆ ನಡುವೆ ಪರಸ್ಪರ ಸಂಪರ್ಕ ಇರುತ್ತದೆ. ಕೇಂದ್ರೀಕೃತ ನಿರ್ವಹಣಾ ಕೇಂದ್ರದಿಂದ ಟೆಲಿಮೆಡಿಸಿನ್‌ ಹಾಗೂ ವರ್ಚುಯಲ್‌ ಆರೋಗ್ಯ ಸೇವೆಯಿಂದ ಆಶಾ ಕಾರ್ಯಕರ್ತೆಯರವರೆಗೆ. ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಪೊಲೀಸ್‌ ವರಿಷ್ಠಾಧಿಕಾರಿ ಎಲ್ಲರೂ ಪರಸ್ಪರ ಸಂಪರ್ಕದಲ್ಲಿ ಇರುತ್ತಾರೆ.

ADVERTISEMENT

‘ಕೋವಿಡ್‌ನಿಂದಾಗಿ ನಾನು ಭಾರತದಲ್ಲಿ 30 ಸಿಬ್ಬಂದಿ ಕಳೆದುಕೊಂಡಿದ್ದೇನೆ. ನನ್ನ ತಾಯಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು. ಮನೆಯಲ್ಲಿದ್ದೇ ಅವರು ಆರೈಕೆ ಪಡೆದರು. ಆಕ್ಸಿಮೀಟರ್‌ ರೀಡಿಂಗ್‌ ಮಾಹಿತಿ, ದೇಹದ ತಾಪಮಾನ, ಒಟ್ಟು ಆರೋಗ್ಯ ಸ್ಥಿತಿ ಕುರಿತು ವೈದ್ಯರಿಗೆ ನಿಯಮಿತವಾಗಿ ಸಂದೇಶ ಕಳುಹಿಸಲಾಗುತ್ತಿತ್ತು. ಹಾಗೂ ಚಿಕಿತ್ಸಾ ಸಲಹೆ ಪಡೆಯಲಾಗುತ್ತಿತ್ತು. ತಾಯಿಗೆ ಈ ವ್ಯವಸ್ಥೆಯಡಿ ಚಿಕಿತ್ಸೆ ಆಗಬಹುದಾದರೆ, ಎಲ್ಲರಿಗೂ ಬಳಕೆಯಾಗಲಿ ಎಂಬ ಚಿಂತನೆಯ ಪರಿಣಾಮವಾಗಿ ಈಗ ಕರ್ನಲ್‌ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ’ ಎಂದರು.

ಕರ್ನಲ್‌ ಜಿಲ್ಲೆಯ ಜನಸಂಖ್ಯೆ ಸುಮಾರು 16 ಲಕ್ಷ. ಸದ್ಯ 5,500 ಕೋವಿಡ್‌ ಪ್ರಕರಣಗಳಿವೆ. ದೃಢೀಕರಣ ಪ್ರಮಾಣ ಶೇ 20. ಸರ್ಕಾರದ ಅಂದಾಜಿನಂತೆ, ಶೇ 94ರಷ್ಟು ಸೋಂಕು ಪೀಡಿತರನ್ನು ಮನೆಯಲ್ಲಿ ಇರಿಸಿಯೇ ಆರೈಕೆ ಮಾಡಬಹುದು. ಶೇ 5ರಷ್ಟು ಜನರಿಗೆ ಆಸ್ಪತ್ರೆ ವಾಸ, ಶೇ 1ರಷ್ಟು ಜನರಿಗೆ ಐಸಿಯು ಚಿಕಿತ್ಸೆ ಅಗತ್ಯವಿದೆ. ಇದರಿಂದ ಒಟ್ಟಾರೆಯಾಗಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಕಡಿಮೆ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕಮ್ಯಾಂಡ್‌ ಸೆಂಟರ್, ಕಾಲ್‌ ಸೆಂಟರ್, ಕೋವಿಡ್‌–199 ಹಾಟ್‌ಲೈನ್, ಸೋಂಕಿನ ಸಾಮಾನ್ಯ ಲಕ್ಷಣಗಳಿದ್ದಾಗ ವರ್ಚುಯಲ್‌ ಸ್ವರೂಪದಲ್ಲಿ ಆರೋಗ್ಯ ಸೇವೆ ಒದಗಿಸಲು 200 ವೈದ್ಯಕೀಯ ವಿದ್ಯಾರ್ಥಿಗಳ ತಂಡ, ಆಂಬುಲೆನ್ಸ್ ಮತ್ತು ಸಂಚಾರಿ ಔಷಧಾಲಯ. ಮನೆಯಲ್ಲಿಯೇ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರಿಗೂ ಅಗತ್ಯ ತರಬೇತಿ ನೀಡಲಾಗುತ್ತದೆ.

ಡೆಲಾಯ್ಟ್‌ ಸಹಯೋಗದಲ್ಲಿ ರೂಪಿಸಿದ ಈ ಕಾರ್ಯಕ್ರಮವನ್ನು ಹರಿಯಾಣದ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ನಿರ್ವಹಣೆ ಮಾಡುತ್ತಿದೆ. ಮುಂದಿನ ಹಂತದಲ್ಲಿ ರೋಹ್ಟಕ್‌ ಜಿಲ್ಲೆಯಲ್ಲಿ ಜಾರಿಗೆ ಬರಲಿದೆ ಎಂದರು.

ಕಂಪನಿಯು ಈ ಯೋಜನೆಗೆ ₹ 5 ಕೋಟಿ ವಿನಿಯೋಗ ಮಾಡುತ್ತಿದೆ. ಹೆಚ್ಚುವರಿಯಾಗಿ ಕಾರ್ಯಕ್ರಮದ ಜಾರಿಗೆ 25 ಜನರ ಸ್ವಯಂಸೇವಕರ ತಂಡವನ್ನು ನಿಯೋಜಿಸಲಾಗಿದೆ. ಕೋವಿಡ್ ನಂತರ ಗ್ರಾಮೀಣ ಭಾಗದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸಲು ಇದನ್ನು ಬಳಸಬಹುದಾಗಿದೆ ಎಂದು ರೆಂಜೆನ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.