ADVERTISEMENT

ಒಬಿಸಿ ಪಟ್ಟಿಗೆ ಸೇರಿಸಲು ವೀರಶೈವ ಲಿಂಗಾಯತರ ಬೇಡಿಕೆ

ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಸಭೆ * 200ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 18:07 IST
Last Updated 13 ಫೆಬ್ರುವರಿ 2021, 18:07 IST
ಸಭೆಯಲ್ಲಿ ಉಜ್ಜಯಿನಿಯ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲದ ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಯವರು ಬಿ.ಎಸ್. ಪರಮಶಿವಯ್ಯ ಅವರಿಗೆ ಮನವಿ ಸಲ್ಲಿಸಿದರು. ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಇದ್ದರು -ಪ್ರಜಾವಾಣಿ ಚಿತ್ರ 
ಸಭೆಯಲ್ಲಿ ಉಜ್ಜಯಿನಿಯ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲದ ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಯವರು ಬಿ.ಎಸ್. ಪರಮಶಿವಯ್ಯ ಅವರಿಗೆ ಮನವಿ ಸಲ್ಲಿಸಿದರು. ಕೆಆರ್‌ಐಡಿಎಲ್ ಅಧ್ಯಕ್ಷ ರುದ್ರೇಶ್ ಇದ್ದರು -ಪ್ರಜಾವಾಣಿ ಚಿತ್ರ    

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿಗೆ ಒತ್ತಾಯಿಸಿ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿರುವ ಮಧ್ಯೆಯೇ, ರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಸ್ವಾಮೀಜಿಗಳು ನಗರದಲ್ಲಿ ಶನಿವಾರ ಸಭೆ ನಡೆಸಿದರು.

ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನು ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ, ‘ವೀರಶೈವ ಲಿಂಗಾಯತದ ಒಳಪಂಗಡಗಳ ಪೈಕಿ ಕೇವಲ 30 ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ಉಳಿದ 70ಕ್ಕೂ ಹೆಚ್ಚು ಪಂಗಡಗಳಿಗೆ ಈ ಸೌಲಭ್ಯವಿಲ್ಲ. ಸಮುದಾಯದ ಎಲ್ಲ ಉಪಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ರಾಜ್ಯಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಕಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಒಬಿಸಿ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಚಿನ್ನಪ್ಪರೆಡ್ಡಿ ಆಯೋಗವನ್ನು ರಚಿಸಿದ್ದರೆ, ಕೇಂದ್ರ ಸರ್ಕಾರ ಮಂಡಲ್‌ ಆಯೋಗವನ್ನು ರಚಿಸಿತು. ಆದರೆ, ಈ ಎರಡೂ ಆಯೋಗಗಳು ತದ್ವಿರುದ್ಧ ವರದಿ ನೀಡಿದವು’ ಎಂದರು.

‘ಈಗಾಗಲೇ ಕೇಂದ್ರಸರ್ಕಾರ ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪಂಗಡಗಳಿಗೆ ಹೋಲಿಸಿದರೆ, ವೀರಶೈವ ಲಿಂಗಾಯತ ಒಳಪಂಗಡಗಳಲ್ಲಿ ಶೇ 51.06ರಷ್ಟು ಅನಕ್ಷರಸ್ಥರು ಇದ್ದಾರೆ. ಭೂರಹಿತರ ಪ್ರಮಾಣ ಶೇ 11.6ರಷ್ಟಿದೆ. ಅದೇ ಈಗಾಗಲೇ ಒಬಿಸಿ ಪಟ್ಟಿಯಲ್ಲಿರುವ ಭೂರಹಿತರ ಪ್ರಮಾಣ ಶೇ 0.27ರಷ್ಟು ಮಾತ್ರ ಎಂದು ಚಿನ್ನಪ್ಪರೆಡ್ಡಿ ಆಯೋಗ ಹೇಳಿತ್ತು. ಈ ದತ್ತಾಂಶಗಳನ್ನು ಪರಿಗಣಿಸಿ, ಉಳಿದ ಪಂಗಡಗಳನ್ನೂ ಒಬಿಸಿ ಪಟ್ಟಿಗೆ ಸೇರಿಸಬೇಕು’ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರವಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮನವಿ ಸ್ವೀಕರಿಸಿದರು.

‘ಪಾದಯಾತ್ರೆಗೂ ಬೆಂಬಲವಿದೆ’

‘ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆರಾಷ್ಟ್ರೀಯ ವೀರಶೈವ ಲಿಂಗಾಯತ ಮಠಾಧೀಶರ ಒಕ್ಕೂಟದ ಬೆಂಬಲವೂ ಇದೆ’ ಎಂದು ವಿಭೂತಿಪುರ ಮಠದ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.‘ಪಾದಯಾತ್ರೆಗೆ ಪರ್ಯಾಯವಾಗಿ ಈ ಸಮಾವೇಶ ನಡೆದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.