ADVERTISEMENT

ಹೈಕಮಾಂಡ್‌ ಮನವಿ ಮೇರೆಗೆ ಡಿಸಿಎಂ ಆಗಲು ಒಪ್ಪಿದ ಫಡಣವೀಸ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 13:50 IST
Last Updated 30 ಜೂನ್ 2022, 13:50 IST
   

ನವದೆಹಲಿ: ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಿರಲು ಮತ್ತು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ವಹಿಸಿಕೊಳ್ಳಲು ಸಮ್ಮತಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಖಚಿತಪಡಿಸಿದ್ದಾರೆ.

ಈ ಬಗ್ಗೆ ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ. ‘ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಕೋರಿಕೆಯ ಮೇರೆಗೆ ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಿರಲು ಒಪ್ಪಿದ್ದಾರೆ. ಫಡಣವೀಸ್ ಅವರ ಈ ನಿರ್ಧಾರವು ಮಹಾರಾಷ್ಟ್ರದ ಜನರೆಡೆಗಿನ ಅವರ ಸೇವಾ ಮನೋಭಾವವನ್ನು ತೋರಿಸುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ

ಇದಕ್ಕೂ ಮೊದಲು ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದ್ದ ಜೆ.ಪಿ ನಡ್ಡಾ, ‘ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಬೇಕು ಎಂದು ಬಿಜೆಪಿಯ ಕೇಂದ್ರ ನಾಯಕತ್ವ ನಿರ್ಧರಿಸಿದೆ. ಹಾಗಾಗಿ ಅವರಿಗೆ ವೈಯಕ್ತಿಕವಾಗಿ ಮನವಿ ಮಾಡುತ್ತಿದ್ದೇನೆ. ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಕೇಂದ್ರ ನಾಯಕತ್ವ ಹೇಳಿದೆ’ ಎಂದು ನಡ್ಡಾ ತಿಳಿಸಿದರು.

ADVERTISEMENT

ಅಚ್ಚರಿಯ ವಿದ್ಯಮಾನವೊಂದರಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಶಿವಸೇನಾ ನಾಯಕ ಏಕನಾಥ ಶಿಂಧೆ ನಿಯೋಜನೆಗೊಂಡಿದ್ದಾರೆ. ಈ ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಫಡಣವೀಸ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಹುದ್ದೆಯನ್ನು ಬಾಳಾ ಠಾಕ್ರೆಯವರ ಶಿವಸೈನಿಕನೊಬ್ಬನಿಗೆ ಬಿಟ್ಟುಕೊಟ್ಟಿದ್ದಕ್ಕಾಗಿ ಶಿಂಧೆ ಅವರು ಫಡಣವೀಸ್‌ ಅವರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ಅವರದ್ದು ದೊಡ್ಡತನ ಎಂದೂ ಬಣ್ಣಿಸಿದ್ದಾರೆ.

ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರು 2014ರ ಅಕ್ಟೋಬರ್‌ 31ರಿಂದ 2019ರ ನವೆಂಬರ್‌ 12ರ ವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.