ADVERTISEMENT

ಭ್ರಷ್ಟಾಚಾರ ಪ್ರಕರಣ: ಮುಂಬೈ ಪೊಲೀಸರಿಂದ ದೇವೇಂದ್ರ ಫಡಣವೀಸ್‌ಗೆ ಸಮನ್ಸ್

ಮೃತ್ಯುಂಜಯ ಬೋಸ್
Published 12 ಮಾರ್ಚ್ 2022, 10:31 IST
Last Updated 12 ಮಾರ್ಚ್ 2022, 10:31 IST
ದೇವೇಂದ್ರ ಫಡಣವೀಸ್‌ – ಪಿಟಿಐ ಚಿತ್ರ
ದೇವೇಂದ್ರ ಫಡಣವೀಸ್‌ – ಪಿಟಿಐ ಚಿತ್ರ   

ಮುಂಬೈ: ಪೊಲೀಸರ ವರ್ಗಾವಣೆ ಮತ್ತು ನೇಮಕಾತಿಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್‌ಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಫಡಣವೀಸ್ ಭಾನುವಾರ ವಿಚಾರಣೆಗೆ ಹಾಜರಾಗಲಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿರುವ ಫಡಣವೀಸ್ 5 ವರ್ಷಗಳ ಕಾಲ ಗೃಹ ಖಾತೆಯನ್ನೂ ಹೊಂದಿದ್ದರು. ವರ್ಗಾವಣೆ, ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಅಪರಾಧ ದಂಡಸಂಹಿತೆಯ ‘ಸೆಕ್ಷನ್ 160’ ಹಾಗೂ ‘ಅಧಿಕೃತ ರಹಸ್ಯ ಕಾಯ್ದೆ, 1923’ರ ಅಡಿಯಲ್ಲಿ ದಾಖಲಿಸಲಾಗಿರುವ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಫಡಣವೀಸ್‌ಗೆ ಸೂಚಿಸಲಾಗಿದೆ.

2021ರ ಮಾರ್ಚ್‌ನಲ್ಲಿ ಫಡಣವೀಸ್ ಅವರು ಹಗರಣದ ಬಗ್ಗೆ ಆರೋಪ ಮಾಡಿದ್ದರು.

‘ಹಗರಣದ ವರದಿಗಳ ಬಗ್ಗೆ ತನಿಖೆ ನಡೆಸುವ ಬದಲು ಮಹಾರಾಷ್ಟ್ರ ಸರ್ಕಾರವು ಪ್ರತೀಕಾರದಿಂದ ಪ್ರಕರಣಗಳನ್ನು ದಾಖಲಿಸುವಂತೆ ಮುಂಬೈ ಪೊಲೀಸರಿಗೆ ನಿರ್ದೇಶಿಸಿದೆ’ ಎಂದು ಫಡಣವೀಸ್ ಆರೋಪಿಸಿದ್ದಾರೆ.

‘ನಾನು ಪ್ರತಿಪಕ್ಷ ನಾಯಕ. ನನಗೆ ಕೆಲವು ಸವಲತ್ತುಗಳಿವೆ. ನನಗೆ ಎಲ್ಲಿಂದ ಮಾಹಿತಿ ಸಿಕ್ಕಿತು ಎಂಬುದನ್ನು ಪೊಲೀಸರು ಪ್ರಶ್ನಿಸುವಂತಿಲ್ಲ. ಆದಾಗ್ಯೂ ನಾನು ಮುಖ್ಯಮಂತ್ರಿ ಹಾಗೂ ಗೃಹ ಸಚಿವನಾಗಿದ್ದುದರಿಂದ ನನ್ನ ಕರ್ತವ್ಯ ಏನೆಂಬುದನ್ನು ಅರ್ಥ ಮಾಡಿಕೊಂಡು ಪೊಲೀಸರ ಮುಂದೆ ಹಾಜರಾಗಲು ನಿರ್ಧರಿಸಿದ್ದೇನೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.