ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ನಲ್ಲಿ ಜಮಾಯಿಸಿರುವ ಭಕ್ತ ಸಾಗರ
–ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಹಲವು ಭಕ್ತರು ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಭಕ್ತರು ವದಂತಿಗಳಿಗೆ ಕಿವಿ ಕೊಡಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಲ್ತುಳಿತಕ್ಕೆ ಸಂಬಂಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಕಾರ್ಯದರ್ಶಿ, ಸಿಎಂ ಕಚೇರಿ ಅಧಿಕಾರಿಗಳು ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರೊಂದಿಗೆ ಸಭೆ ನಡೆಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
‘ಪ್ರಯಾಗ್‌ರಾಜ್‌ನಲ್ಲಿ ಇಂದು ಸುಮಾರು 8ರಿಂದ 10 ಕೋಟಿ ಭಕ್ತರು ಸೇರಿದ್ದಾರೆ. ತ್ರಿವೇಣಿ ಸಂಗಮದತ್ತ (ಗಂಗಾ, ಯಮುನಾ, ಸರಸ್ವತಿ ನದಿ ಸೇರುವ ಸ್ಥಳ) ಅಸಂಖ್ಯಾತ ಜನರು ಸೇರುತ್ತಿದ್ದಾರೆ. ಅಖಾರ ಮಾರ್ಗದಲ್ಲಿ ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿ ಕೆಲವು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.
‘ನಿನ್ನೆ (ಮಂಗಳವಾರ) ರಾತ್ರಿಯೇ ಮೌನಿ ಅಮಾವಾಸ್ಯೆ ಮೂಹೂರ್ತ ಆರಂಭವಾದಾಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯಪಾಲರು ಆನಂದಿಬೆನ್ ಪಟೇಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ’ ಎಂದು ಯೋಗಿ ವಿವರಿಸಿದ್ದಾರೆ.
‘ಸದ್ಯ ಪ್ರಯಾಗ್‌ರಾಜ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ತ್ರಿವೇಣಿ ಮಾರ್ಗ, ಕಾಳಿ ಮಾರ್ಗ, ನಾಗ್ ವಾಸುಕಿ ರಸ್ತೆ, ಝೂಸಿ ರಸ್ತೆ, ಸಂಗಮ್ ಬೌಡ್ ರಸ್ತೆ ಸೇರಿದಂತೆ ಹಲವು ರಸ್ತೆಗಳು ಕಿಕ್ಕಿರಿದ ಜನರಿಂದ ತುಂಬಿವೆ. ಭಕ್ತರು ಯಾವುದೇ ವದಂತಿಗಳಿಗೆ ಕಿವಿ ಕೊಡಬಾರದು ಎಂದು ನಾನು ಭಕ್ತರಿಗೆ ಮನವಿ ಮಾಡುತ್ತೇನೆ’ ಎಂದಿದ್ದಾರೆ.
‘ಇಡೀ ಕುಂಭ ಪ್ರದೇಶದಲ್ಲಿ ಘಾಟ್‌ಗಳನ್ನು ನಿರ್ಮಿಸಲಾಗಿದೆ. ಭಕ್ತರು ತ್ರಿವೇಣಿ ಸಂಗಮದ ಕಡೆಗೆ ಹೋಗುವ ಅಗತ್ಯವಿಲ್ಲ. ಭಕ್ತರು ತಮ್ಮ ಹತ್ತಿರದ ಘಾಟ್‌ಗಳಲ್ಲಿ ಪವಿತ್ರ ಸ್ನಾನ ಮಾಡಬೇಕು. ಕಾಲ್ತುಳಿತದಲ್ಲಿ ಗಾಯಗೊಂಡಿರುವವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನ ವಿವಿಧ ನಿಲ್ದಾಣಗಳಿಂದ ವಿಶೇಷ ರೈಲುಗಳನ್ನು ಆಯೋಜಿಸಲಾಗಿದೆ. ಭಕ್ತರು ಸುರಕ್ಷಿತವಾಗಿ ತಮ್ಮ ಸ್ಥಳಗಳಿಗೆ ಹಿಂತಿರುಗಬೇಕು ಎಂದು ಅವರು ಹೇಳಿದ್ದಾರೆ.
ಮೌನಿ ಅಮಾವಾಸ್ಯೆ ದಿನವಾದ ಇಂದು (ಬುಧವಾರ) ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಅಪಾರ ಭಕ್ತಸಾಗರವೇ ಪ್ರಯಾಗ್‌ರಾಜ್‌ನಲ್ಲಿ ಜಮಾಯಿಸಿದೆ. ಮಹಾಕುಂಭಮೇಳದ ಎರಡನೇ ‘ಪವಿತ್ರ ಸ್ನಾನ’ ಇದಾಗಿದ್ದು, 10 ಕೋಟಿ ಭಕ್ತರು ಸಂಗಮದಲ್ಲಿ ಮಿಂದೇಳುವ ನಿರೀಕ್ಷೆಯಿದೆ.
ಜನವರಿ 13 ರಂದು ಆರಂಭವಾಗಿರುವ ಮಹಾಕುಂಭಮೇಳವು ಫೆಬ್ರುವರಿ 26ರವರೆಗೆ ನಡೆಯಲಿದೆ. ಈ ಬಾರಿ ಕುಂಭಮೇಳಕ್ಕೆ 45 ಕೋಟಿ ಜನ ಆಗಮಿಸುವ ನಿರೀಕ್ಷೆ ಇದೆ ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.