ನವದೆಹಲಿ: ಭಾರತದಲ್ಲಿ ವಿಮಾನಯಾನ ಕ್ಷೇತ್ರ ತ್ವರಿತಗತಿಯಲ್ಲಿ ಪ್ರಗತಿ ಕಾಣುತ್ತಿದೆ. ಆದರೆ ವಿಮಾನಗಳ ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯಗಳು ಆಗುತ್ತಿರುವುದರಿಂದ ಭಾರತದ ಏರ್‌ಲೈನ್ಸ್‌ಗಳಿಗೆ ವಿಮಾನಗಳ ಕೊರತೆ ತೀವ್ರವಾಗಿ ಕಂಡು ಬರುತ್ತಿದೆ.
ಹೀಗಾಗಿ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಬಗೆಹರಿಸುವ ನಿಟ್ಟಿನಲ್ಲಿ ಡಿಜಿಸಿಎ ತನ್ನ ‘ನಾಗರಿಕ ವಿಮಾನಯಾನ ಅಗತ್ಯತೆಗಳ’ ನಿಯಮಾವಳಿಗಳಿಗೆ ಕೆಲ ಬದಲಾವಣೆಗಳನ್ನು ತಂದು ಪೂರೈಕೆ ಸರಿ ಮಾಡುವಲ್ಲಿ ಮುಂದಡಿ ಇಟ್ಟಿದೆ.
ಉದ್ದೇಶಿತ ಹೊಸ ನಿಯಮಾವಳಿಗಳ ಪ್ರಕಾರ 20 ವರ್ಷ ಹಳೆಯದಾದ ಸುಸ್ಥಿತಿಯಲ್ಲಿನ ದೊಡ್ಡ ವಿಮಾನಗಳನ್ನು, ಲಘು ವಿಮಾನಗಳನ್ನು (ಚಾರ್ಟರ್ ಫ್ಲೈಟ್) ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ, ಗುತ್ತಿಗೆ, ಖರೀದಿ ಆಧಾರದ ಮೇಲೆ ಆಮದು ಮಾಡಿಕೊಳ್ಳಲು ಏರ್‌ಲೈನ್ಸ್‌ಗಳಿಗೆ ಅನುಮತಿ ನೀಡಲಾಗುತ್ತದೆ.
ಇಷ್ಟು ದಿನ 18 ವರ್ಷ ಹಳೆಯದಾದ ವಿಮಾನಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಶೀಘ್ರದಲ್ಲಿಯೇ ನಿಯಮಾವಳಿಗಳಿಗೆ ಬದಲಾವಣೆ ತಂದು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.
ಭಾರತದಲ್ಲಿ ಸದ್ಯ ಈ ರೀತಿ ಆಮದು ಮಾಡಿಕೊಂಡ ಸೆಕೆಂಡ್ ಹ್ಯಾಂಡ್ ವಿಮಾನಗಳ ಸಂಖ್ಯೆ 870 ರಷ್ಟಿದೆ.
ಭಾರತದ ಏರ್‌ಲೈನ್ಸ್‌ಗಳು ಸದ್ಯ ಸುಮಾರು 1400 ವಿಮಾನಗಳನ್ನು ತರಿಸಿಕೊಳ್ಳಲು ಕಾರ್ಯಾದೇಶ ನೀಡಿವೆ. ಸದ್ಯ ಭಾರತದಲ್ಲಿ 1 ಲಕ್ಷಕ್ಕೂ ಅಧಿಕ ಕಮರ್ಷಿಯಲ್ ವಿಮಾನಗಳಿವೆ. ಇದರಲ್ಲಿ 98,333 ದೇಶೀಯ ವಿಮಾನಗಳು ಮತ್ತು 18,574 ಅಂತರರಾಷ್ಟ್ರೀಯ ವಿಮಾನಗಳು.
ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ ಜಗತ್ತಿನ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. 2030ರ ವೇಳೆಗೆ ಈಗಿರುವ ಏರ್ ಟ್ರಾಫಿಕ್ ಪ್ರಮಾಣವನ್ನು ದ್ವಿಗುಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.