ADVERTISEMENT

ಅಂಗವಿಕಲ ಬಾಲಕನಿಗೆ ಪ್ರವೇಶ ನಿರಾಕರಣೆ: ಇಂಡಿಗೊ ಏರ್‌ಲೈನ್ಸ್‌ಗೆ ₹ 5 ಲಕ್ಷ ದಂಡ

ಪಿಟಿಐ
Published 28 ಮೇ 2022, 11:01 IST
Last Updated 28 ಮೇ 2022, 11:01 IST
   

ನವದೆಹಲಿ: ಮೇ 7 ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಬಾಲಕನಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನಿರಾಕರಿಸಿದ ಇಂಡಿಗೊ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಶನಿವಾರ ₹ 5 ಲಕ್ಷ ದಂಡ ವಿಧಿಸಿದೆ.

ಬಾಲಕ ಗಾಬರಿಗೊಂಡವನಂತೆ ಕಾಣುತ್ತಿದ್ದರಿಂದ ರಾಂಚಿ–ಹೈದರಾಬಾದ್ ವಿಮಾನ ಹತ್ತಲು ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಹೀಗಾಗಿ, ಆತನ ಜೊತೆಗಿದ್ದ ಪೋಷಕರು ವಿಮಾನ ಹತ್ತಲು ನಿರಾಕರಿಸಿದರು ಎಂದು ಏರ್‌ಲೈನ್ಸ್ ಮೇ 9ರಂದು ತಿಳಿಸಿತ್ತು.

ಪ್ರಕರಣ ಕುರಿತಂತೆ ತನಿಖೆ ನಡೆಸಲು ಮೇ 9ರಂದು ಡಿಜಿಸಿಎ, ಮೂರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಿದೆ. ಸಂಸ್ಥೆಯು ನಿಯಮ ಉಲ್ಲಂಘಿಸಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ ಎಂದು ಡಿಜಿಸಿಎ ತಿಳಿಸಿದೆ.

ADVERTISEMENT

'ಅಂಗವಿಕಲ ಬಾಲಕನನ್ನು ನಡೆಸಿಕೊಳ್ಳುವಲ್ಲಿ ಇಂಡಿಗೊ ಏರ್‌ಲೈನ್ಸ್ ಲೋಪ ಎಸಗಿದೆ’ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.

ಸಿಬ್ಬಂದಿ ಸಹಾನುಭೂತಿಯಿಂದ ನಡೆದುಕೊಂಡಿದ್ದರೆ ಮಗು ಶಾಂತವಾಗುತ್ತಿತ್ತು. ಪ್ರವೇಶ ನಿರಾಕರಿಸುವ ಮೂಲಕ ಅನಗತ್ಯ ವಿವಾದ ಮಾಡಲಾಗಿದೆ ಎಂದು ಹೇಳಿಕೆ ಹೇಳಿದೆ.

ವಿಶೇಷ ಸಂದರ್ಭಗಳಲ್ಲಿ ಅಸಾಧಾರಣ ಪ್ರತಿಕ್ರಿಯೆಗಳ ಅಗತ್ಯವಿರುತ್ತದೆ. ಆದರೆ, ಏರ್‌ಲೈನ್‌ನ ಸಿಬ್ಬಂದಿ ಈ ಸನ್ನಿವೇಶ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ನಾಗರಿಕ ವಿಮಾನಯಾನ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಅದು ಹೇಳಿದೆ.

‘ಇದನ್ನು ಗಮನದಲ್ಲಿಟ್ಟುಕೊಂಡು ಡಿಜಿಸಿಎಯ ಸಕ್ಷಮ ಪ್ರಾಧಿಕಾರವು ಸಂಬಂಧಿತ ವಿಮಾನಯಾನ ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಏರ್‌ಲೈನ್‌ಗೆ 5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನಿರ್ಧರಿಸಲಾಗಿದೆ‘ ಎಂದು ಡಿಜಿಸಿಎ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.