ADVERTISEMENT

ವಿಮಾನಗಳಲ್ಲಿ ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ಗೆ ಡಿಜಿಸಿಎ ನೋಟಿಸ್‌

ಪಿಟಿಐ
Published 6 ಜುಲೈ 2022, 19:52 IST
Last Updated 6 ಜುಲೈ 2022, 19:52 IST
**EDS: TWITTER IMAGE POSTED BY @avpak3 ON TUESDAY, JULY 5, 2022** Karachi: Dubai-bound SpiceJet Boeing 737 Max aircraft after its landing following a fuel indicator malfunction, at Karachi Airport. (PTI Photo)(PTI07_05_2022_000094B)
**EDS: TWITTER IMAGE POSTED BY @avpak3 ON TUESDAY, JULY 5, 2022** Karachi: Dubai-bound SpiceJet Boeing 737 Max aircraft after its landing following a fuel indicator malfunction, at Karachi Airport. (PTI Photo)(PTI07_05_2022_000094B)   

ನವದೆಹಲಿ: 18 ದಿನಗಳ ಅವಧಿಯಲ್ಲಿ ಸಂಸ್ಥೆಯ 8 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ಸ್ಪೈಸ್‌ಜೆಟ್‌ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದೆ. ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.

‘ಸುರಕ್ಷಿತ, ಸಮರ್ಥ ಹಾಗೂ ವಿಶ್ವಾಸಾರ್ಹ ವಿಮಾನ ಸೇವೆಗಳನ್ನು ಒದಗಿಸುವಲ್ಲಿ ಸ್ಪೈಸ್‌ಜೆಟ್‌ ವಿಫಲವಾಗಿದೆ. ಹಾಗಾಗಿ, ವಿಮಾನ ನಿಯಮಗಳಡಿ ಕಂಪನಿಗೆ ನೋಟಿಸ್‌ ನೀಡಲಾಗಿದೆ’ ಎಂದು ಡಿಜಿಸಿಎ ತಿಳಿಸಿದೆ.

‘ಈವರೆಗಿನ ಘಟನೆಗಳನ್ನು ಅವಲೋಕಿಸಿದಾಗ, ಸೂಕ್ತ ನಿರ್ವಹಣೆ ಇಲ್ಲದಿರುವುದು ಕಂಡುಬಂದಿದೆ. ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಲೋಪ ಕಂಡುಬರಲು ಇದುವೇ ಕಾರಣ’ ಎಂದು ಡಿಜಿಸಿಎ ಅಭಿಪ್ರಾಯಪಟ್ಟಿದೆ.

ADVERTISEMENT

‘ಪ್ರಯಾಣಿಕರ ಸುರಕ್ಷತೆ ಮುಖ್ಯ‘: ಸ್ಪೈಸ್‌ಜೆಟ್‌ಗೆ ಕಾರಣ ಕೇಳಿ ನೋಟಿಸ್‌ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಪ್ರಯಾಣಿಕರ ಸುರಕ್ಷತೆಯೇ ಮುಖ್ಯ’ ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸುರಕ್ಷತೆಗೆ ಅಡ್ಡಿಯಾಗುವ ಸಣ್ಣ ದೋಷ ಕಂಡುಬಂದರೂ, ಆ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ದೋಷವನ್ನು ಸರಿಪಡಿಸಲಾಗುವುದು’ ಎಂದು ಹೇಳಿದ್ದಾರೆ.

ರಾಡಾರ್‌ನಲ್ಲಿ ಸಮಸ್ಯೆ: ಕೋಲ್ಕತ್ತಗೆ ಮರಳಿದ ಸ್ಪೈಸ್‌ಜೆಟ್‌ ವಿಮಾನ

ನವದೆಹಲಿ: ಕೋಲ್ಕತ್ತದಿಂದ ಚೀನಾದ ಚಾಂಗ್‌ಕಿಂಗ್‌ಗೆ ಹೊರಟಿದ್ದ ಸ್ಪೈಸ್‌ಜೆಟ್‌ನ ವಿಮಾನವೊಂದು, ಹವಾಮಾನ ರಾಡಾರ್‌ ಕಾರ್ಯನಿರ್ವಹಿಸದ ಕಾರಣ ಕೋಲ್ಕತ್ತಕ್ಕೆ ಮರಳಿದ ಘಟನೆ ಮಂಗಳವಾರ ನಡೆದಿದೆ.

‘ಕಂಪನಿಯ ಸರಕು ಸಾಗಣೆ ವಿಮಾನ (ಬೋಯಿಂಗ್ 737) ಜುಲೈ 5ರಂದು ಕೋಲ್ಕತ್ತ ವಿಮಾನ ನಿಲ್ದಾಣದಿಂದ ಟೇಕ್ಆಫ್‌ ಆದ ನಂತರ, ಹವಾಮಾನ ಕುರಿತು ಮಾಹಿತಿ ನೀಡುವ ರಾಡಾರ್ ಕಾರ್ಯನಿರ್ವಹಿಸದಿರುವುದು ವಿಮಾನದ ಸಿಬ್ಬಂದಿಗೆ ಗೊತ್ತಾಗಿದೆ. ಅವರು ಕೂಡಲೇ ಮರಳಿದ್ದು, ಸುರಕ್ಷಿತವಾಗಿ ವಿಮಾನವನ್ನು ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಇಳಿಸಿದರು’ ಎಂದು ಸ್ಪೈಸ್‌ಜೆಟ್ ವಕ್ತಾರರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

‘ಶೀಘ್ರ ಪ್ರತಿಕ್ರಿಯೆ’

‘ಡಿಜಿಸಿಎ ನೀಡಿರುವ ನೋಟಿಸ್‌ಗೆ ನಿಗದಿತ ಕಾಲಮಿತಿಯೊಳಗೆ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಸ್ಪೈಸ್‌ಜೆಟ್‌ ತಿಳಿಸಿದೆ.

‘ನಮ್ಮ ಸಂಸ್ಥೆ ಐಎಟಿಎ–ಐಒಎಸ್‌ಎ ಮಾನ್ಯತೆ ಹೊಂದಿದೆ. ವಿಮಾನಗಳ ಸುರಕ್ಷಿತ ಕಾರ್ಯಾಚರಣೆ, ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ’ ಎಂದು ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.