ADVERTISEMENT

ವರದಕ್ಷಿಣೆ ವಿರೋಧಿಸಿ ಹಸೆಮಣೆಯೇರಿದ ಅಂಗವಿಕಲರು

ರಾಜಸ್ಥಾನದ ಎನ್‌ಎಸ್‌ಎಸ್‌ ಆಯೋಜನೆಯ ಸಾಮೂಹಿಕ ವಿವಾಹ ಕಾರ್ಯಕ್ರಮ

ಪಿಟಿಐ
Published 27 ಡಿಸೆಂಬರ್ 2020, 12:45 IST
Last Updated 27 ಡಿಸೆಂಬರ್ 2020, 12:45 IST
ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ನಾರಾಯಣ್ ಸೇವಾ ಸಂಸ್ಥಾನವು ವರದಕ್ಷಿಣೆ ವಿರೋಧಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಂಗವಿಕಲರು ದಾಂಪತ್ಯ ಜೀವನ ಪ್ರವೇಶಿಸಿದರು –ಎಎಫ್‌ಪಿ ಚಿತ್ರ
ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ನಾರಾಯಣ್ ಸೇವಾ ಸಂಸ್ಥಾನವು ವರದಕ್ಷಿಣೆ ವಿರೋಧಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಂಗವಿಕಲರು ದಾಂಪತ್ಯ ಜೀವನ ಪ್ರವೇಶಿಸಿದರು –ಎಎಫ್‌ಪಿ ಚಿತ್ರ   

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ನಾರಾಯಣ್ ಸೇವಾ ಸಂಸ್ಥಾನವು (ಎನ್‌ಎಸ್‌ಎಸ್‌) ‘ವರದಕ್ಷಿಣೆ ವಿರೋಧಿ ಅಭಿಯಾನ’ದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 11 ಅಂಗವಿಕಲ ಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದವು.

‘ಕೋವಿಡ್‌–19 ನಿಯಮಾವಳಿಗಳನ್ನು ಅನುಸರಿಸಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮದಲ್ಲಿ, ಬಡ ಕುಟುಂಬದ 11 ಅಂಗವಿಕಲ ಜೋಡಿಗಳು ವಿವಾಹವಾದವು. ಕೋವಿಡ್ ಕಾರಣ ದಂಪತಿಗಳ ಸಂಬಂಧಿಕರು ಮತ್ತು ಎನ್‌ಎಸ್‌ಎಸ್ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು’ ಎಂದು ಎನ್‌ಎಸ್‌ಎಸ್‌ ತಿಳಿಸಿದೆ.

‘ಅಂಗವೈಕಲ್ಯ ಅನ್ನುವುದು ಕೇವಲ ದೈಹಿಕ ನ್ಯೂನತೆ. ಆದರೆ, ಅದು ರೋಗವಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದವರು ಪೂಜಾ ಅವರನ್ನು ಮದುವೆಯಾದ ಕಮಲೇಶ್.

ADVERTISEMENT

ಮೂರು ವರ್ಷವಿರುವಾಗಲೇ ಪೊಲಿಯೋ ಪೀಡಿತರಾದ ಕಮಲೇಶ್ ಅವರು ಶಸ್ತ್ರಚಿಕಿತ್ಸೆಯ ಬಳಿಕ ಊರುಗೋಲಿನ ನೆರವಿನಿಂದ ನಡೆದಾಡುವಷ್ಟು ಸಬಲರಾಗಿದ್ದಾರೆ. ಪೊಲಿಯೋ ಇದೆ ಎಂದು ಕಮಲೇಶ್ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಅಂದುಕೊಂಡಂತೆ ಶಿಕ್ಷಣ ಪೂರೈಸಿದ ಅವರು, ಗ್ರಾಮ ಪಂಚಾಯ್ತಿಯಲ್ಲಿ ‌ಸಹಾಯಕರಾಗಿ ನೌಕರಿ ಪಡೆಯುವಲ್ಲಿ ಯಶಸ್ವಿಯಾದರು.

‘ನಾನು ಮಾನಸಿಕವಾಗಿ ಬಲಶಾಲಿಯಾಗಿದ್ದೇನೆ. ಸವಾಲುಗಳು ನನ್ನನ್ನು ಗಟ್ಟಿಗೊಳಿಸಿವೆ. ಶಿಕ್ಷಣ ಪೂರ್ಣಗೊಂಡ ಬಳಿಕ ಅಂಗಡಿಯೊಂದರ ಮೂಲಕ ವ್ಯಾಪಾರ ಆರಂಭಿಸಿದೆ. ಈಗ ಪಂಚಾಯಿತಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಬೆಂಬಲಿಸುವ ಜೀವನ ಸಂಗಾತಿ ಸಿಕ್ಕಿದ್ದು ಸಂತಸ ತಂದಿದೆ’ ಎಂದು ಕಮಲೇಶ್ ಹರ್ಷ ವ್ಯಕ್ತಪಡಿಸಿದರು.

ಅಪಘಾತವೊಂದರಲ್ಲಿ ತಮ್ಮ ಒಂದು ಕಾಲು ಕಳೆದುಕೊಂಡಿದ್ದ ಪೂಜಾ ಎನ್‌ಎಸ್‌ಎಸ್ ನೆರವಿನಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ‘ಕಮಲೇಶ್ ಅವರನ್ನು ವಿವಾಹವಾಗಿದ್ದು ಖುಷಿ ತಂದಿದೆ’ ಎಂದು ಅವರು ಸಂತಸ ಹಂಚಿಕೊಂಡರು.

‘ಎನ್‌ಎಸ್‌ಎಸ್ ವತಿಯಿಂದ 18 ವರ್ಷಗಳಿಂದ ‘ವರದಕ್ಷಿಣೆ ವಿರೋಧಿ ಆಂದೋಲನ’ ನಡೆಸುತ್ತಿದ್ದೇವೆ. ಇದುವರೆಗೆ 2098 ಜೋಡಿಗಳು ವರದಕ್ಷಿಣೆ ಇಲ್ಲದೇ ವಿವಾಹವಾಗಿವೆ’ ಎಂದು ಮಾಹಿತಿ ನೀಡಿದರು ಎನ್‌ಎಸ್ಎಎಸ್ ಅಧ್ಯಕ್ಷ ಪ್ರಶಾಂತ್ ಅಗರ್‌ವಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.