ನವದೆಹಲಿ: ಕೌಶಲಾಭಿವೃದ್ಧಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರು ಆಧಾರ್ ಸಂಖ್ಯೆ ಅಥವಾ ಅದಕ್ಕೆ ಅರ್ಜಿ ಸಲ್ಲಿಸಿದ ದಾಖಲೆ ನೀಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಆಧಾರ್ ಇಲ್ಲದಿದ್ದರೆ ಅಥವಾ ದೃಢೀಕರಣ ವಿಫಲವಾದ ಕಾರಣಕ್ಕೆ ಯಾವುದೇ ಅಂಗವಿಕಲ ಮಕ್ಕಳನ್ನು ಸೌಲಭ್ಯದಿಂದ ವಂಚಿತಗೊಳಿಸುವುದಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಪ್ರಯಾಣ ಮತ್ತು ವಸತಿ ಭತ್ಯೆ, ನೇಮಕಾತಿ ಬಳಿಕದ ನೆರವು ಸೇರಿದಂತೆ ನಗದು ಸೌಲಭ್ಯಗಳನ್ನು ಪಡೆಯಲು ಆಧಾರ್ ದೃಢೀಕರಣ ಅತ್ಯಗತ್ಯವಾಗಿರುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಅಂಗವಿಕಲರ ಕೌಶಲಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿ–ಎಸ್‌ಡಿಪಿ)ಯನ್ನು 2015ರಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅಂಗವಿಕಲರಿಗೆ ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡಿ ಅವರು ಉದ್ಯೋಗ ಪಡೆಯುವಂತೆ ಮಾಡಲಾಗುತ್ತದೆ. ಅಂಗವಿಕಲರಿಗಾಗಿ ಆಧಾರ್ ನೋಂದಣಿ ಕೇಂದ್ರ ತೆರೆಯುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಸಚಿವಾಲಯ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.