ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ನೆರವು: ನಿಯಮ ಬಿಗಿ

ಪಿಟಿಐ
Published 3 ಸೆಪ್ಟೆಂಬರ್ 2025, 14:18 IST
Last Updated 3 ಸೆಪ್ಟೆಂಬರ್ 2025, 14:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಅಂಗವಿಕಲ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಕ್ರೈಬ್‌ಗಳನ್ನು (ಪರೀಕ್ಷೆ ಬರೆಯಲು ಸಹಾಯಕರು) ಬಳಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಬಿಗಿಗೊಳಿಸಿದೆ. 

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಏಜೆನ್ಸಿಗಳು ಎರಡು ವರ್ಷಗಳೊಳಗೆ ತಮ್ಮದೇ ಆದ ‘ಸ್ಕ್ರೈಬ್ ಪೂಲ್‌’ಗಳನ್ನು (ಸ್ಕ್ರೈಬ್‌ಗಳ ತಂಡ) ಸಿದ್ಧಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳು ತ‌ಮ್ಮ ಸ್ವಂತ ಆಯ್ಕೆಯ ಸ್ಟ್ರೈಬ್‌ಗಳಿಂದ ಪರೀಕ್ಷೆ ಬರೆಸುವ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕಲು ನಿರ್ಧರಿಸಲಾಗಿದೆ.

ADVERTISEMENT

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳು, ‘ಪರೀಕ್ಷೆಗಳಲ್ಲಿ ನ್ಯಾಯಯುತ ನಡವಳಿಕೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ’ಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ.

ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಒಂದೂಗೂಡಿಸಿ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ–2016 ಮತ್ತು ಸಾರ್ವಜನಿಕ ಪರೀಕ್ಷೆ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಕಾಯ್ದೆ–2024ರಲ್ಲಿನ ಅಂಶಗಳನ್ನು ಸೇರಿಸಿಕೊಂಡು ಮಾರ್ಗಸೂಚಿ ರೂಪಿಸಲಾಗಿದೆ.

ಲ್ಯಾಪ್‌ಟಾಪ್‌, ಬ್ರೈಲ್, ರೆಕಾರ್ಡಿಂಗ್ ಸಾಧನಗಳು, ಜೆಎಡಬ್ಲ್ಯುಎಸ್ ಮತ್ತು ಎನ್‌ವಿಡಿಎಯಂತಹ ಸ್ಕ್ರೀನ್ ರೀಡರ್‌, ಸ್ಪೀಚ್‌ ಟು ಟೆಕ್ಸ್ಟ್‌ ಸಾಫ್ಟ್‌ವೇರ್‌ ತಂತ್ರಜ್ಞಾನಗಳ ನೆರವಿನಿಂದ ಸ್ವತಂತ್ರವಾಗಿ ಪರೀಕ್ಷೆ ಬರೆಯಲು ಪ್ರಯತ್ನಿಸುವಂತೆ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಮಾರ್ಗಸೂಚಿ ಒತ್ತಿಹೇಳಿದೆ. 

ಯುಪಿಎಸ್‌ಸಿ, ಎಸ್‌ಎಸ್‌ಸಿ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸೇರಿದಂತೆ ಎಲ್ಲಾ ಸಂಸ್ಥೆಗಳು ಎರಡು ವರ್ಷಗಳೊಳಗೆ ತರಬೇತಿ ಪಡೆದ ಮತ್ತು ಸ್ವತಃ ಮೇಲ್ವಿಚಾರಣೆ ನಡೆಸಿದ ಸ್ಕ್ರೈಬ್‌ಗಳ ತಂಡಗಳನ್ನು ರಚಿಸಬೇಕು. ಅಲ್ಲಿಯವರೆಗೆ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅಭ್ಯರ್ಥಿಗಳಿಗೆ ತಮ್ಮ ಸ್ವಂತ ಸ್ಕ್ರೈಬ್‌ಗಳನ್ನು ಕರೆತರಲು ಅವಕಾಶವಿರುತ್ತದೆ ಎಂದು ಮಾರ್ಗಸೂಚಿ ತಿಳಿಸಿದೆ. 

ಸ್ಟ್ರೈಬ್‌ಗಳ ಅರ್ಹತೆಯ ನಿಯಮವನ್ನೂ ಬಿಗಿಗೊಳಿಸಲಾಗಿದೆ. ಪರೀಕ್ಷೆ ಬರೆಯುವ ಸಹಾಯಕರ ವಿದ್ಯಾರ್ಹತೆಯು ಸಾಮಾನ್ಯವಾಗಿ ಪರೀಕ್ಷೆಗೆ ಅಗತ್ಯವಿರುವ ವಿದ್ಯಾರ್ಹತೆಗಿಂತ ಕನಿಷ್ಠ 2–3 ಶೈಕ್ಷಣಿಕ ವರ್ಷಗಳಿಗಿಂತ ಕಡಿಮೆಯಿರಬೇಕು. ಸ್ಕ್ರೈಬ್‌ ಮತ್ತು ಅಭ್ಯರ್ಥಿ ಒಂದೇ ಪರೀಕ್ಷೆಗೆ ಅಭ್ಯರ್ಥಿಗಳಾಗಿರಬಾರದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.