ADVERTISEMENT

ದೆಹಲಿ: ಮಹಿಳೆಯರಿಗೆ ತಿಂಗಳಿಗೆ ₹2,500; ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 15:38 IST
Last Updated 6 ಜನವರಿ 2025, 15:38 IST
<div class="paragraphs"><p>ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದ ಡಿಕೆಶಿ</p></div>

ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದ ಡಿಕೆಶಿ

   

ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ‘ಗೃಹಲಕ್ಷ್ಮಿ’ ಮಾದರಿಯಲ್ಲಿ ‘ಪ್ಯಾರಿ ದೀದಿ ಯೋಜನೆ’ ಮೂಲಕ ದೆಹಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2500 ನೀಡುವ ಗ್ಯಾರಂಟಿ ಭರವಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಪ್ರಕಟಿಸಿದರು.

ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ದೆಹಲಿ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯ ಭಾಗವಾಗಿ ಮೊದಲ ಗ್ಯಾರಂಟಿ ಭರವಸೆಯನ್ನು ಪ್ರಕಟಿಸಿದರು.

ADVERTISEMENT

ಇದೇ ವೇಳೆ ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳ ಕುಟುಂಬಗಳಲ್ಲಿ ಆಗಿರುವ ಬದಲಾವಣೆ ಹಾಗೂ ನೆರವಿನ ಕುರಿತ ವಿಡಿಯೋಗಳನ್ನು ಪ್ರಸಾರ ಮಾಡಲಾಯಿತು.

‘ನಾವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸರ್ಕಾರ ದಿವಾಳಿಯಾಗಲಿದೆ ಎಂದು ಲೇವಡಿ ಮಾಡಿದ್ದರು. ಮಹಾರಾಷ್ಟ್ರದಲ್ಲೂ ನಮ್ಮ ಯೋಜನೆ ವಿರುದ್ಧ ಅಪಪ್ರಚಾರ ಮಾಡಿದ್ದರು. ನಂತರ ಎಲ್ಲ ರಾಜ್ಯಗಳ ಚುನಾವಣೆಯಲ್ಲೂ ಅವರೇ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಘೋಷಣೆ ಮಾಡಿದ್ದಾರೆ’ ಎಂದು ಅವರು ಹೇಳಿದರು. 

‘ಕರ್ನಾಟಕ ರಾಜ್ಯದ ಬಜೆಟ್ ಗಾತ್ರ ₹3.70 ಲಕ್ಷ ಕೋಟಿಯಷ್ಟಿದೆ. ಅದರಲ್ಲಿ ₹56 ಸಾವಿರ ಕೋಟಿಯನ್ನು ಈ ಯೋಜನೆಗಳಿಗೆ ವೆಚ್ಚ ಮಾಡಲಾಗುತ್ತಿದೆ. ಫಲಾನುಭವಿಗಳ ಖಾತೆಗೆ ಹಣ ತಲುಪುವುದು 10-15 ದಿನಗಳು ವಿಳಂಬವಾಗಬಹುದು. ಆದರೆ, ನಮ್ಮ ಯೋಜನೆ ನಿಲ್ಲುವುದಿಲ್ಲ. ನಮ್ಮ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದೆ’ ಎಂದರು.

ಇನ್ನೂ ನಾಲ್ಕು ಗ್ಯಾರಂಟಿ?: 

ಪಕ್ಷವು ಇನ್ನೂ ನಾಲ್ಕು ಗ್ಯಾರಂಟಿಗಳನ್ನು ಘೋಷಿಸಲು ಯೋಜಿಸಿದೆ. ನಗರದ ಎಲ್ಲ ನಿವಾಸಿಗಳಿಗೆ ತಲಾ ₹20-25 ಲಕ್ಷ ಆರೋಗ್ಯ ವಿಮಾ ರಕ್ಷಣೆ, 400 ಯೂನಿಟ್‌ಗಳ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರಿಗೆ ಅಪ್ರೆಂಟಿಸ್‌ಶಿಪ್ ತರಬೇತಿ ಕಾರ್ಯಕ್ರಮ, ಅಗತ್ಯ ವಸ್ತುಗಳ ಪಡಿತರ ಕಿಟ್‌ಗಳು– ಈ ಗ್ಯಾರಂಟಿಗಳಾಗಿರಲಿವೆ. ಆರೋಗ್ಯ ವಿಮಾ ಯೋಜನೆಯ ಗ್ಯಾರಂಟಿಯನ್ನು ಬುಧವಾರ ಪ್ರಕಟಿಸುವ ಸಂಭವ ಇದೆ. 

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕಿ ಸೋನಿಯಾ ಗಾಂಧಿ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕರ್ನಾಟಕ, ತೆಲಂಗಾಣ, ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಕಾಂಗ್ರೆಸ್ 'ಖಾತ್ರಿ'ಗಳನ್ನು ಘೋಷಿಸಿದ್ದರು. ಆದರೆ, ದೆಹಲಿ ಚುನಾವಣೆಯಲ್ಲಿ ಈ ಹೊಣೆಯನ್ನು ಅವರು ರಾಜ್ಯಗಳ ನಾಯಕರಿಗೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.