ಪವನ್ ಕಲ್ಯಾಣ್
ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೆದಿದ್ದ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಸಭೆಯ ಆಹ್ವಾನವನ್ನು ತಿರಸ್ಕರಿಸಿದ್ದೇವೆ ಎಂದು ತೆಲುಗು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಸ್ಪಷ್ಟಪಡಿಸಿದೆ.
ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂಬಂಧ ಅವಿರತ ಹೋರಾಟಕ್ಕೆ ತಮಿಳುನಾಡು ಜತೆಗೆ ಕೈಜೋಡಿಸುವಂತೆ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ಹಾಗೂ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮತ್ತು ಪಕ್ಷಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು.
ಕೇಂದ್ರ ಸರ್ಕಾರ ನಡೆಸಲು ಹೊರಟಿರುವ, ಜನಸಂಖ್ಯಾ ಅನುಪಾತ ಆಧರಿಸಿದ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯು ಅನ್ಯಾಯದ ಕಸರತ್ತು. ಇದರ ವಿರುದ್ಧ ರಾಜಿ ಇಲ್ಲದ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಭಾಗವಾಗಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದರು.
ಈ ನಿಟ್ಟಿನಲ್ಲಿ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಮೊದಲ ಸಭೆ ಇಂದು (ಶನಿವಾರ) ನಡೆದಿದ್ದು, ಸಭೆಯಲ್ಲಿ ಜನಸೇನಾ ನಾಯಕರು ಭಾಗವಹಿಸಿದ್ದಾರೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಈ ಕುರಿತು ಪವನ್ ಕಲ್ಯಾಣ್ ಅವರ ರಾಜಕೀಯ ಕಾರ್ಯದರ್ಶಿ, ಎಂಎಲ್‌ಸಿ ಪಿ. ಹರಿಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
‘ಬಿಜೆಪಿಯ ಮಿತ್ರ ಪಕ್ಷವಾದ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ಚರ್ಚಿಸಲು ಕರೆಯಲಾದ ಜೆಎಸಿ ಸಭೆಗೆ ಹಾಜರಾಗುವಂತೆ ಆಹ್ವಾನ ಬಂದಿತ್ತು. ಆದರೆ, ಡಿಎಂಕೆ ನೀಡಿದ ಆಹ್ವಾನವನ್ನು ನಾವು ತಿರಸ್ಕರಿಸಿದ್ದೇವೆ’ ಎಂದು ಹೇಳಿದ್ದಾರೆ.
ಜೆಎಸಿ ಸಭೆಯಲ್ಲಿ ಜನಸೇನಾ ಭಾಗವಹಿಸಿದೆ ಎಂಬ ವದಂತಿಗಳು ಕೇಳಿ ಬಂದಿವೆ. ಇವು ಕೇವಲ ಊಹಾಪೋಹವಷ್ಟೇ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಕುರಿತು ಜನಸೇನಾ ತನ್ನ ನಿಲುವನ್ನು ಶೀಘ್ರವೇ ಪ್ರಕಟಿಸಲಿದೆ ಎಂದು ಹರಿಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನ ಸಭೆಯಲ್ಲಿ ಹಲವು ನಾಯಕರು ಭಾಗಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆದಿದ್ದ ಜೆಎಸಿ ಸಭೆಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ ದಾಸ್ ಮತ್ತು ಬಿಜು ಜನತಾ ದಳ ಮುಖಂಡ ಸಂಜಯ್ ಕುಮಾರ್ ದಾಸ್ ಬರ್ಮಾ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.