ADVERTISEMENT

ಬಿಜೆಪಿಯ ಕೇಸರೀಕರಣದ ಕನಸು ಭಗ್ನಗೊಳಿಸುತ್ತೇವೆ: ಡಿಎಂಕೆ ನೇರ ವಾಗ್ದಾಳಿ

ಮೊದಲ ಸಭೆಯಲ್ಲೇ ಡಿಎಂಕೆ ನೂತನ ಸಾರಥಿ ಎಂ.ಕೆ.ಸ್ಟಾಲಿನ್‌ ಕೇಂದ್ರದ ವಿರುದ್ಧ ಗುಡುಗು

ಪಿಟಿಐ
Published 8 ಸೆಪ್ಟೆಂಬರ್ 2018, 14:28 IST
Last Updated 8 ಸೆಪ್ಟೆಂಬರ್ 2018, 14:28 IST
   

ಚೆನ್ನೈ: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ‘ಚುನಾಯಿತ ಸರ್ವಾಧಿಕಾರ’ ಧೋರಣೆ ತಳೆದಿದೆ ಎಂದು ಡಿಎಂಕೆ ನೇರ ವಾಗ್ದಾಳಿ ಮಾಡಿದೆ.

ರಾಷ್ಟ್ರೀಯ ಪಕ್ಷ ಬಿಜೆಪಿಯು ಹೊಂದಿರುವ ದೇಶವನ್ನು ಕೇಸರೀಕರಣಗೊಳಿಸುವ ಕನಸನ್ನು ಭಗ್ನಗೊಳಿಸುವುದಾಗಿಯೂ ಅದು ಗುಡುಗಿದೆ.

ಡಿಎಂಕೆ ನೂತನ ಸಾರಥಿಯಾಗಿ ಆಯ್ಕೆಯಾದ ನಂತರ ಎಂ.ಕೆ.ಸ್ಟಾಲಿನ್‌ ಇದೇ ಮೊದಲ ಬಾರಿಗೆ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು, ಸಂಸದರು ಹಾಗೂ ಶಾಸಕರ ಸಭೆ ನಡೆಸಿದ ಪಕ್ಷದ ಮುಖ್ಯಸ್ಥರ ಸಭೆ ನಡೆಸಿದರು.

ADVERTISEMENT

‘ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಯಾವುದೇ ಬೆಲೆ ತೆರಲು ಸಿದ್ಧವಿದ್ದೇವೆ’ ಎಂದು ಅವರು ಘೋಷಿಸಿದರು.

ನೋಟು ರದ್ದು, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ, ನೀಟ್‌ ಹಾಗೂ ಸದ್ಯದ ಆರ್ಥಿಕ ಪರಿಸ್ಥಿತಿ ಸೇರಿ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಸಾಧಿಸಿದೆ ಎಂದು ಅವರು ಆರೋಪಿಸಿದರು.

‘ಕೇಂದ್ರ ಸರ್ಕಾರವು ತಮಿಳುನಾಡಿನ ಹಿತಾಸಕ್ತಿ ನಿರ್ಲಕ್ಷಿಸುತ್ತಿದೆ. ಕೋಮುವಾದಕ್ಕೆ ಕುಮ್ಮಕ್ಕು ನೀಡುತ್ತಿದೆ. ಇದರಿಂದ ದೇಶದ ಬಹುತ್ವಕ್ಕೆ ಧಕ್ಕೆಯಾಗುತ್ತಿದೆ. ಅಲ್ಲದೆ, ಬಿಜೆಪಿ ವಿರೋಧಿಸುವವರಿಗೆ ಮತ್ತು ಮಾನವ ಹಕ್ಕುಗಳ ಹೋರಾಟಗಾರರಿಗೂ ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ’ ಎಂದು ಅವರು ಕಿಡಿಕಾರಿದರು.

ಸಂಸದೀಯ ಪ್ರಜಾಪ್ರಭುತ್ವಕ್ಕೆ ‘ಚುನಾಯಿತ ಸರ್ವಾಧಿಕಾರ’ ದೊಡ್ಡ ಸವಾಲು. ಬಿಜೆಪಿ ಚುನಾಯಿತ ಸರ್ವಾಧಿಕಾರವನ್ನು ದೇಶದಲ್ಲಿ ಪ್ರತಿಷ್ಠಾಪಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಜನವಿರೋಧಿ ಆಡಳಿತ ನಡೆಸಿದೆ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲವು ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಬಿಜೆಪಿ ಸರ್ಕಾರದ ಆಡಳಿತ ಟೀಕಿಸಲು ಮಾಧ್ಯಮಗಳು ‘ಭೀತಿ’ಗೊಂಡಿವೆ ಎಂದು ಅವರಯ ಆರೋಪಿಸಿದರು.

‘ಬಿಜೆಪಿಯ ಕೇಸರೀಕರಣ ಕನಸುಗಳನ್ನು ತಿರಸ್ಕರಿಸಬೇಕು’ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಕೇಂದ್ರದ ವಿರುದ್ಧ ಇದೇ ಸೆ.18ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.