ADVERTISEMENT

ಮಹಿಳಾ ಮತದಾರರನ್ನು ಸೆಳೆಯಲು ಡಿಎಂಕೆ ಪ್ಲಾನ್; ಬಿಹಾರ ಮಾದರಿಯ ಮೊರೆಹೋದ ಸ್ಟಾಲಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 7:03 IST
Last Updated 13 ಫೆಬ್ರುವರಿ 2026, 7:03 IST
<div class="paragraphs"><p>ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (ಸಂಗ್ರಹ ಚಿತ್ರ)</p></div>

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ (ಸಂಗ್ರಹ ಚಿತ್ರ)

   

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಸುತ್ತಿದ್ದು, ಆಡಳಿತಾರೂಢ ಡಿಎಂಕೆ ಪಕ್ಷ ಮಹಿಳಾ ಮತದಾರರನ್ನು ಸೆಳೆಯಲು ಮಹತ್ವದ ಹೆಜ್ಜೆ ಇಟ್ಟಿದೆ. ಅದರ ಅನ್ವಯ ಮಾಸಿಕ ಸಹಾಯಧನ ಯೋಜನೆಯ ₹1 ಸಾವಿರ ಹಣವನ್ನು 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮೂರು ತಿಂಗಳ ಮುಂಗಡ ಹಣವನ್ನು ವರ್ಗಾವಣೆ ಮಾಡಿದೆ.

ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ಮರಳಿ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಸಹಾಯಧನವನ್ನು ₹1 ಸಾವಿರದಿಂದ ₹2 ಸಾವಿರಕ್ಕೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ.

ADVERTISEMENT

ಮುಂದಿನ ಕೆಲವು ತಿಂಗಳುಗಳವರೆಗೆ ಮಾಸಿಕ ಸಹಾಯಧನ ವಿತರಣೆಯನ್ನು ನಿಲ್ಲಿಸಲು ಬಿಜೆಪಿ ಮತ್ತು ಎಐಎಡಿಎಂಕೆ ಪಿತೂರಿ ನಡೆಸುತ್ತಿವೆ ಎಂದು ವಿಧಾನಸಭಾ ಚುನಾವಣೆ ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲೇಖಿಸಿರುವ ಎಂ.ಕೆ. ಸ್ಟಾಲಿನ್ ಅವರು ವಿಡಿಯೊ ಮೂಲಕ ಆರೋಪಿಸಿದ್ದಾರೆ.

‘ಹಾಗಾಗಿ, ನಮ್ಮ ಸರ್ಕಾರ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ ತಿಂಗಳ ಸಹಾಯಧನವನ್ನು ತಲಾ ₹1 ಸಾವಿರದಂತೆ ಮತ್ತು ಬೇಸಿಗೆಯಲ್ಲಿನ ಖರ್ಚುಗಳನ್ನು ನಿಭಾಯಿಸಲು ಹೆಚ್ಚುವರಿಯಾಗಿ ₹2 ಸಾವಿರ ಸೇರಿದಂತೆ ಒಟ್ಟು ₹5 ಸಾವಿರ ಜಮಾ ಮಾಡುತ್ತಿದ್ದೇವೆ’ ಎಂದು ವಿಡಿಯೊ ಮೂಲಕ ತಿಳಿಸಿದ್ದಾರೆ.

‘ಸತತ ಮೂರು ತಿಂಗಳವರೆಗೆ ಮಾಸಿಕ ಸಹಾಯಧನ ಜಮಾ ಆಗದಿದ್ದರೆ, ನೀವು ಎದುರಿಸುವ ಸಮಸ್ಯೆಗಳನ್ನು ನಾನು ಊಹಿಸಬಲ್ಲೆ. ಮಕ್ಕಳ ಪರೀಕ್ಷೆ, ಔಷಧಿಗೆ ಹಣ ಎಲ್ಲಿಂದ ಪಡೆಯುತ್ತೀರಿ? ಎಂದಿರುವ ಅವರು, ನಿಮಗೆ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ನಾನು ನಿಮ್ಮ ಬ್ಯಾಂಕ್ ಖಾತೆಗಳಿಗೆ ₹5,000 ಜಮಾ ಮಾಡಲು ಆದೇಶಿಸಿದ್ದೇನೆ’ ಎಂದು ಸ್ಟಾಲಿನ್ ಅವರು ವಿವರಿಸಿದ್ದಾರೆ.

ಈಗಾಗಲೆ ₹9 ಲಕ್ಷ ಕೋಟಿಗೂ ಅಧಿಕ ಸಾಲ ಹೊಂದಿರುವ ತಮಿಳುನಾಡು ರಾಜ್ಯವು ₹2,000 ಹೆಚ್ಚುವರಿ ಬೇಸಿಗೆ ಅನುದಾನ ಮತ್ತು ಮಾಸಿಕ ಸಹಾಯಧನ ಹೆಚ್ಚಿಸುವ ಭರವಸೆಯಿಂದಾಗಿ ತಮಿಳುನಾಡಿನ ಖಜಾನೆಗೆ ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇದೆ.

ಬಿಹಾರ ಮಾದರಿ ಮೊರೆ ಹೋದ ತಮಿಳುನಾಡು

ತಮಿಳುನಾಡು ಸರ್ಕಾರವು ಬಿಹಾರ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಎನ್‌ಡಿಎ ಮೈತ್ರಿಕೂಟ ಚುನಾವಣೆಗೆ ಒಂದು ತಿಂಗಳು ಮೊದಲು 'ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ' ಅಡಿಯಲ್ಲಿ 75 ಲಕ್ಷ ಮಹಿಳೆಯರಿಗೆ ತಲಾ ₹10,000 ಸಹಾಯಧನ ನೀಡುವ ಯೋಜನೆಗೆ 2025ರ ಸೆಪ್ಟೆಂಬರ್ 26ರಂದು ಚಾಲನೆ ನೀಡಿದ್ದರು.

ಇದಾದ ಒಂದು ತಿಂಗಳ ಬಳಿಕ, (ನವೆಂಬರ್ 6–11) ಬಿಹಾರದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು. ಎನ್‌ಡಿಎ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.