ADVERTISEMENT

ಖರ್ಗೆ ಅವರನ್ನು ಲೇವಡಿ ಮಾಡಿದ ಡಿಎಂಕೆ ವಕ್ತಾರ ಅಮಾನತು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 15:38 IST
Last Updated 21 ಅಕ್ಟೋಬರ್ 2022, 15:38 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಚೆನ್ನೈ: ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಲೇವಡಿ ಮಾಡಿದ್ದಕ್ಕಾಗಿ ತನ್ನ ಪಕ್ಷದ ವಕ್ತಾರ ಕೆ.ಎಸ್. ರಾಧಾಕೃಷ್ಣನ್ ಅವರನ್ನು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು(ಡಿಎಂಕೆ) ಶುಕ್ರವಾರ ಅಮಾನತು ಮಾಡಿದೆ.

ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಅವರು ರಾಧಾಕೃಷ್ಣನ್ ಅವರನ್ನು ಡಿಎಂಕೆಯಲ್ಲಿ ಹೊಂದಿರುವ ಎಲ್ಲಾ ಹುದ್ದೆಗಳಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಾಧಾಕೃಷ್ಣನ್ ಅವರ ನಡವಳಿಕೆಯು ಪಕ್ಷಕ್ಕೆ ಅಪಖ್ಯಾತಿ ತರುತ್ತಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ರಾಧಾಕೃಷ್ಣನ್ ಅವರು, ಖರ್ಗೆ ಅವರ ಮಾರ್ಪಾಡಿಸಿದ ಚಿತ್ರವನ್ನು ಹಂಚಿಕೊಂಡಿದ್ದು, ‘ಮನಮೋಹನ್ ಸಿಂಗ್ 2.0 ಆಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು’ ಎನ್ನುವ ಶೀರ್ಷಿಕೆ ನೀಡಿದ್ದಾರೆ.

‘ಗಾಂಧಿ ಅವರ ಕುಟುಂಬಕ್ಕೆ ಸಿಂಗ್ ಅವರು ಕೈಗೊಂಬೆಯಾಗಿದ್ದರು. ಖರ್ಗೆ ಅವರು ಕೂಡಾ ಮಾಜಿ ಪ್ರಧಾನಿಯನ್ನೇ ಅನುಕರಿಸಲಿದ್ದಾರೆ’ ಎಂದು ರಾಧಾಕೃಷ್ಣನ್ ಟ್ವೀಟ್ ಮಾಡಿದ್ದರು. ಇದಕ್ಕೆ ಕೆಲವರು ತೀವ್ರವಾಗಿ ಟೀಕೆ ಮಾಡುತ್ತಿದ್ದಂತೆಯೇ ರಾಧಾಕೃಷ್ಣನ್ ತಮ್ಮ ಟ್ವೀಟ್ ಅನ್ನು ಅಳಿಸಿಹಾಕಿದ್ದಾರೆ.

ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಸಂಸದೆ ಕನಿಮೊಳಿ ಅವರು ಖರ್ಗೆ ಅವರನ್ನು ಅಭಿನಂದಿಸುತ್ತಿರುವ ಸಂದರ್ಭದಲ್ಲಿ ಈ ಟ್ವೀಟ್ ಬೆಳಕಿಗೆ ಬಂದಿದೆ. ಡಿಎಂಕೆಯ ಸಂಸದೀಯ ಪಕ್ಷದ ನಾಯಕ ಟಿ.ಆರ್. ಬಾಲು ಅವರು ಖರ್ಗೆ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.