ನವದೆಹಲಿ: ಪ್ರಸ್ತಾಪಿತ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಡಿಎಂಕೆ ನಾಯಕ ಎಂ. ಷಣ್ಮುಗಂ ಶುಕ್ರವಾರ ರಾಜ್ಯಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದು, ಸಂಸತ್ತಿನಲ್ಲಿ ತಮಿಳುನಾಡಿನಂತಹ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ರಕ್ಷಿಸಲು 1997ರ ಜನಸಂಖ್ಯಾ ದತ್ತಾಂಶವನ್ನು ಆಧರಿಸಿ ಪುನರ್ ವಿಂಗಡಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾರ್ಚ್ 22ರಂದು ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕರೆದಿರುವ ಸಭೆಗೆ ಮುಂಚಿತವಾಗಿ ಈ ಹೇಳಿಕೆ ಬಂದಿದೆ. ಈ ವಿಷಯವನ್ನು ಚರ್ಚಿಸಲು ಹಲವು ರಾಜ್ಯಗಳ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.
ಗೃಹ ಸಚಿವಾಲಯದ ಕಾರ್ಯವೈಖರಿಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಷಣ್ಮುಗಂ, ಮಾರ್ಚ್ 7ರಂದು ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸಿದರು.
ಕ್ಷೇತ್ರ ಪುನರ್ ವಿಂಗಡಣೆಯ ನಂತರ 'ತಮಿಳುನಾಡಿನಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ' ಎಂದು ಶಾ ಭರವಸೆ ನೀಡಿದ್ದರು. ಈ ಹೇಳಿಕೆಯು ಪರಿಹಾರಕ್ಕಿಂತ ಹೆಚ್ಚಿನ ಗೊಂದಲವನ್ನು ಸೃಷ್ಟಿಸಿದೆ ಎಂದು ಷಣ್ಮುಗಂ ಹೇಳಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಯು ಇತ್ತೀಚಿನ ಜನಸಂಖ್ಯಾ ದತ್ತಾಂಶವನ್ನು ಅವಲಂಬಿಸಿದ್ದರೆ ದಕ್ಷಿಣದ ರಾಜ್ಯಗಳು ತಮ್ಮ ಸಂಸದೀಯ ಸ್ಥಾನಗಳಲ್ಲಿ ಕಡಿತವಾಗುವ ಆತಂಕವನ್ನು ಹೊಂದಿವೆ ಎಂದು ಷಣ್ಮುಗಂ ಒತ್ತಿ ಹೇಳಿದ್ದಾರೆ.
‘ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ಅದನ್ನು ಅನುಪಾತದ ಆಧಾರದ ಮೇಲೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸಲು 1997ರ ಜನಗಣತಿಯ ದತ್ತಾಂಶವನ್ನು ಬಳಸಬೇಕು. ಕನಿಷ್ಠ 25 ವರ್ಷಗಳವರೆಗೆ ಬೇರೆ ಜನಗಣತಿಯನ್ನು ಪರಿಗಣಿಸಬಾರದು’ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಇನ್ನೂ ಜನಗಣತಿ ಪ್ರಕ್ರಿಯೆಯನ್ನು ಪ್ರಾರಂಭಿಸಿಲ್ಲ ಎಂದು ಷಣ್ಮುಗಂ ಗಮನಸೆಳೆದರು. ಕುಟುಂಬ ಯೋಜನಾ ನೀತಿಗಳನ್ನು ಅನುಸರಿಸುವ ದಕ್ಷಿಣ ರಾಜ್ಯಗಳನ್ನು ಕೇಂದ್ರವು ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.