ADVERTISEMENT

ಭದ್ರತಾ ಲೋಪ ಉಲ್ಲಂಘಿಸಿದವರ ಡಿಎನ್‌ಎ ಕಾಂಗ್ರೆಸ್, ಕಮ್ಯುನಿಸ್ಟ್‌ನದ್ದು: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 16:09 IST
Last Updated 14 ಡಿಸೆಂಬರ್ 2023, 16:09 IST
<div class="paragraphs"><p>ಸಂಸತ್ತಿನಲ್ಲಿ ಭದ್ರತಾ ಲೋಪ</p></div>

ಸಂಸತ್ತಿನಲ್ಲಿ ಭದ್ರತಾ ಲೋಪ

   

ನವದೆಹಲಿ: ‘ಸಂಸತ್‌ ಭವನದ ಭದ್ರತೆ ಉಲ್ಲಂಘಿಸಿದ್ದ ಆರೋಪಿಗಳ ವಂಶವಾಹಿ (ಡಿಎನ್‌ಎ) ನಲ್ಲೇ ಕಾಂಗ್ರೆಸ್–ಕಮ್ಯುನಿಸ್ಟ್‌ ಪಕ್ಷಗಳ ಮೂಲವೇ ಆಗಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಭದ್ರತಾ ಲೋಪ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಸದಸ್ಯರು ಸಂಸತ್‌ನಲ್ಲಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದರು.

ADVERTISEMENT

ಅದರ ಬೆನ್ನಲ್ಲೇ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆಂದು ಆರೋಪ ಮಾಡಿದ್ದಾರೆ.

‘ಘಟನೆಯ ನಂತರ ಲಭ್ಯವಾಗುತ್ತಿರುವ ಮಾಹಿತಿ ಗಮನಿಸಿದರೆ ಸಂಸತ್ ಭವನದ ಭದ್ರತೆಯನ್ನು ಉಲ್ಲಂಘಿಸಿದವರ ಡಿಎನ್‌ಎ ನೇರವಾಗಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ ಪಕ್ಷದೊಂದಿಗೆ ಹೊಂದಾಣಿಕೆಯಾಗುತ್ತದೆ. ರಾಹುಲ್ ಗಾಂಧಿ ಅವರ ಭಾರತ್ ಜೊಡೊ ಯಾತ್ರಾದಲ್ಲಿ ಭಾಗಿಯಾದವರು ಹಾಗೂ ಹಿಂದೆ ನಡೆದ ಪ್ರಾಯೋಜಿತ ಪ್ರತಿಭಟನೆಗಳಲ್ಲಿ ಪಾಲ್ಗೊಂಡವರು ಅವರು’ ಎಂದಿದ್ದಾರೆ.

ಬಿಜೆಪಿ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ ಅವರೂ ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇಂಥ ದಾಳಿ ಸಂಸತ್ ಹಾಗೂ ಪ್ರಜಾಪ್ರಭುತ್ವದ ತಳಪಾಯವನ್ನೇ ದುರ್ಬಲಗೊಳಿಸುವ ಪ್ರಯತ್ನವಾಗಿದೆ’ ಎಂದು ಆರೋಪಿಸಿದ್ದಾರೆ.

‘ಇದೇನು ಮೊದಲ ಬಾರಿಯಲ್ಲ. ಕಳೆದ ಅಧಿವೇಶನ ಸಂದರ್ಭದಲ್ಲೂ ಅವರು ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ವೇಳೆಯನ್ನು ನಡೆಯಲು ಬಿಡಲಿಲ್ಲ. ವಿರೋಧ ಪಕ್ಷದವರಿಗೆ ಪ್ರಜಾಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂಬುದೂ ಈ ನಡೆಯಿಂದ ಸಾಭೀತಾಗಿದೆ’ ಎಂದು ಆರೋಪಿಸಿದ್ದಾರೆ.

‘ವಂಶಾಡಳಿತ ನಡೆಸುತ್ತಿರುವ ಭಾರತದ ವಿರೋಧ ಪಕ್ಷಗಳು ಭ್ರಷ್ಟಾಚಾರ ನಡೆಸಿದವರನ್ನು ರಕ್ಷಿಸಿದ್ದಾರೆ. ಕಾಲದಿಂದ ಕಾಲಕ್ಕೆ ಅವರು ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ’ ಎಂದಿದ್ದಾರೆ.

2001ರ ಡಿ. 13ರಂದು ಸಂಸತ್ ಭವನದ ಮೇಲೆ ನಡೆದ ದಾಳಿಯ ಕಹಿ ನೆನಪಿನ ದಿನವೇ ಕೆಲ ಆಗಂತುಕರು ಸಂಸತ್‌ ಭವನದ ಭದ್ರತೆ ಉಲ್ಲಂಘಿಸಿ ಲೋಕಸಭೆ ಒಳಗೆ ಹಾಗೂ ಹೊರಗೆ ಬಣ್ಣದ ಹೊಗೆ ಸಿಂಪಡಿಸಿ, ಘೋಷಣೆ ಕೂಗಿದರು. ಮಹಿಳೆ ಸೇರಿದಂತೆ ಐದು ಜನರನ್ನು ಪೊಲೀಸರು ಈವರೆಗೂ ಬಂಧಿಸಿದ್ದಾರೆ. ಉಳಿದವರಿಗಾಗಿ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.