ADVERTISEMENT

ಮದುವೆ ಸಮಾರಂಭಗಳಿಗೆ ಬಿಜೆಪಿಯವರನ್ನು ಆಹ್ವಾನಿಸದಿರಲು ರೈತರಿಗೆ ತಿಳಿಸಿದ ಟಿಕಾಯತ್‌

ಏಜೆನ್ಸೀಸ್
Published 19 ಫೆಬ್ರುವರಿ 2021, 11:07 IST
Last Updated 19 ಫೆಬ್ರುವರಿ 2021, 11:07 IST
ರೈತರ ಮಹಾಪಂಚಾಯತ್‌ನಲ್ಲಿ ನರೇಶ್‌ ಟಿಕಾಯತ್‌ ಭಾಷಣ
ರೈತರ ಮಹಾಪಂಚಾಯತ್‌ನಲ್ಲಿ ನರೇಶ್‌ ಟಿಕಾಯತ್‌ ಭಾಷಣ   

ನವದೆಹಲಿ: ಬಿಜೆಪಿ ಮುಖಂಡರನ್ನು ಮದುವೆ ಸಮಾರಂಭಗಳಿಗೆ ಆಹ್ವಾನಿಸಬೇಡಿ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್‌ ಅವರು ರೈತರಿಗೆ ಹೇಳಿದ್ದಾರೆ.

ಉತ್ತರ ಪ್ರದೇಶದ ಸಿಸೋಲಿಯಲ್ಲಿ ಶುಕ್ರವಾರ ನಡೆದ ಮಹಾಪಂಚಾಯತ್‌ನಲ್ಲಿ ಮಾತನಾಡಿರುವ ಅವರು, 'ಬಿಜೆಪಿ ಮುಖಂಡರನ್ನು ಮದುವೆ ಸಮಾರಂಭಗಳಿಗೆ ಆಹ್ವಾನಿಸಬೇಡಿ. ಒಂದು ವೇಳೆ ನೀವು ಅವರನ್ನು ಆಹ್ವಾನಿಸಿದರೆ ಮರುದಿನ 100 ಬಿಕೆಯು ಕಾರ್ಯಕರ್ತರಿಗೆ ಊಟ ನೀಡಲು ಸಿದ್ಧರಾಗಿರಿ' ಎಂದು ರೈತರಿಗೆ ಸೂಚಿಸಿದ್ದಾರೆ.

'ಬಿಜೆಪಿ ರೈತರ ಮಾತನ್ನು ಕೇಳುತ್ತಿಲ್ಲ. ಆದ್ದರಿಂದ, ರೈತರು ಕೂಡ ಬಿಜೆಪಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಬಾರದು' ಎಂದು ಟಿಕಾಯತ್‌ ತಿಳಿಸಿದ್ದಾರೆ.

ADVERTISEMENT

ತಮ್ಮ ಸಂಘಟನೆಯ ಕೆಲವು ಜನರನ್ನು ಬಿಜೆಪಿಯು ಮಾನಸಿಕವಾಗಿ ಬಂಧಿಸಿದೆ ಎಂದು ನರೇಶ್‌ ಟಿಕಾಯತ್‌ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.

ಕಳೆದ ವರ್ಷ ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದಾರೆ. ಈ ನಡುವೆ ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು.

ಏತನ್ಮಧ್ಯೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ರೈತ ಸಂಘಟನೆಗಳು ದೇಶವ್ಯಾಪಿಯಾಗಿ ಮಹಾ ಪಂಚಾಯಿತಿಗಳನ್ನು ಆಯೋಜಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ರೈತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.