ಸುಪ್ರೀಂ ಕೋರ್ಟ್
ನವದೆಹಲಿ: ವಿದ್ಯಾರ್ಥಿಗಳು ಯಾವ ಪ್ರದೇಶಕ್ಕೆ ಸೇರಿದವರು ಎಂಬ ಆಧಾರದಲ್ಲಿ ಅವರಿಗೆ ಸ್ನಾತಕೋತ್ತರ ವೈದ್ಯ ಪದವಿ ಕೋರ್ಸ್‌ಗಳಲ್ಲಿ ರಾಜ್ಯ ಸರ್ಕಾರಗಳು ಮೀಸಲಾತಿ ಕಲ್ಪಿಸುವುದು ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ಪೀಠವು, ಇಂತಹ ಮೀಸಲಾತಿಗೆ ಅವಕಾಶ ನೀಡಿದರೆ ಹಲವು ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.
‘ನಾವೆಲ್ಲರೂ ಭಾರತದ ನಿವಾಸಿಗಳು. ಒಂದು ದೇಶದ ಪ್ರಜೆಗಳು, ನಿವಾಸಿಗಳು ಎಂಬ ಬಾಂಧವ್ಯವು ನಮಗೆ ದೇಶದ ಯಾವುದೇ ಪ್ರದೇಶದಲ್ಲಿ ನೆಲೆಯಾಗುವ ಹಕ್ಕನ್ನು ನೀಡುತ್ತದೆ...’ ಎಂದು ಪೀಠವು ವಿವರಿಸಿದೆ.
‘ಇದು ನಮಗೆ ಭಾರತದ ಎಲ್ಲೆಡೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕೋರುವ ಹಕ್ಕನ್ನು ನೀಡುತ್ತದೆ. ನಿರ್ದಿಷ್ಟ ರಾಜ್ಯಗಳ ನಿವಾಸಿಗಳಿಗೆ ವೈದ್ಯಕೀಯ ಕಾಲೇಜು ಸೇರಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಸೌಲಭ್ಯವನ್ನು ಎಂಬಿಬಿಎಸ್ ಕೋರ್ಸ್‌ಗಳಲ್ಲಿ ಮಾತ್ರ ಒಂದು ಹಂತದವರೆಗೆ ನೀಡಬಹುದು’ ಎಂದು ಪೀಠವು ಹೇಳಿದೆ.
‘ಕೆಲವು ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿಯೇ ಅವರನ್ನು ಅಸಮಾನ ಧೋರಣೆಯಿಂದ ಕಂಡರೆ, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.