ADVERTISEMENT

ವರ್ಷದ ರಾಜಕೀಯ ಹಿನ್ನೋಟ | ಟ್ರಂಪ್ ಸುಂಕದ ‘ಸುಳಿ’: ಹಳಸಿದ ದ್ವಿಪಕ್ಷೀಯ ಸಂಬಂಧ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 23:30 IST
Last Updated 24 ಡಿಸೆಂಬರ್ 2025, 23:30 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

‘ಅಮೆರಿಕವೇ ಮೊದಲು, ಅಮೆರಿಕದ ವೈಭವವನ್ನು ಮರಳಿ ತರಬೇಕು, ವಿಶ್ವದ ದೊಡ್ಡಣ್ಣನ ಸ್ಥಾನದಲ್ಲಿಯೇ ಮುಂದುವರಿಯುವಂತೆ ಮಾಡಬೇಕು’ ಎಂದು ಪಣತೊಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವರ್ಷ ಜಾರಿಗೊಳಿಸಿದ ಹಲವು ನೀತಿಗಳು ಜಗತ್ತಿನ ಹಲವು ದೇಶಗಳ ಅರ್ಥ ವ್ಯವಸ್ಥೆಗೆ ಹೊಡೆತ ನೀಡಿವೆ. ಅಂತೆಯೇ ಭಾರತ ಮತ್ತು ಅದರ ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡಿವೆ.

ಟ್ರಂಪ್‌ ಅವರು ಈ ಹಿಂದೆ 2017ರಿಂದ 2021ರವರೆಗೂ ಅಧ್ಯಕ್ಷರಾಗಿದ್ದರು. ಅವರ ಮೊದಲ ಅವಧಿಯಲ್ಲಿ ಭಾರತಕ್ಕೆ ತೊಂದರೆಗಳಾಗಿರಲಿಲ್ಲ. ಭಾರತ-ಅಮೆರಿಕ ಸ್ನೇಹ ಸಂಬಂಧ ಉತ್ತಮವಾಗಿಯೇ ಮುಂದುವರಿದಿತ್ತು. ಆದರೆ ಟ್ರಂಪ್ ಅವರ ಎರಡನೇ ಅವಧಿ ಭಾರತವೂ ಸೇರಿದಂತೆ ಹಲವು ದೇಶಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಸುಂಕದ ‘ಸುಳಿ’ಗೆ ಸಿಲುಕಿವೆ.

ಭಾರತದ ಸರಕುಗಳ ಆಮದು ಮೇಲೆ ಶೇ 25ರಷ್ಟು ಸುಂಕ ಹಾಗೂ ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವುದಕ್ಕೆ ದಂಡನೆಯಾಗಿ ಹೆಚ್ಚುವರಿಯಾಗಿ ಶೇ 25ರಷ್ಟು ಹೆಚ್ಚುವರಿ ಸುಂಕ ಸೇರಿದಂತೆ ಒಟ್ಟು ಶೇ 50ರಷ್ಟು ಸುಂಕವನ್ನು ಟ್ರಂಪ್‌ ಹೇರಿದ್ದಾರೆ. ಇದರಿಂದ ದೇಶದ ವ್ಯಾಪಾರ, ವಹಿವಾಟು, ಉದ್ಯೋಗ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸುಂಕ ಹೇರಿಕೆ ನಂತರ ಭಾರತದ ರಫ್ತಿನ ಪ್ರಮಾಣ ಶೇ 37ರಷ್ಟು ಕುಸಿತವಾಗಿದೆ.   

ADVERTISEMENT

ಗೆಳೆಯನ ಹೆಸರಲ್ಲಿ ಗುದ್ದು: ‘ಭಾರತ ನನ್ನ ಅತ್ಯುತ್ತಮ ಸ್ನೇಹಿತ, ಪ್ರಧಾನಿ ಮೋದಿ ಅತ್ಯುತ್ತಮ ಗೆಳೆಯ’ ಎಂದು ಪದೇ ಪದೇ ಹೇಳುತ್ತಲೇ ಟ್ರಂಪ್ ಅವರು ಭಾರತದ ಮೇಲೆ ಒಂದರ ಮೇಲೆ ಒಂದರಂತೆ ಪ್ರಹಾರಗಳನ್ನು ಮಾಡಿದರು.  

‘ಹೆಚ್ಚುವರಿ ಸುಂಕದ ಬೆದರಿಕೆ ಒಡ್ಡಿ ಭಾರತ- ಪಾಕ್ ಸೇನಾ ಸಂಘರ್ಷ ನಿಲ್ಲುವಂತೆ ಮಾಡಿ ಸಂಭಾವ್ಯ ಅಣ್ವಸ್ತ್ರ ಸಮರವನ್ನು ತಪ್ಪಿಸಿದ್ದು ನಾನೇ’ ಎಂದು 60ಕ್ಕೂ ಹೆಚ್ಚು ಬಾರಿ ಹೇಳಿಕೊಂಡ ಟ್ರಂಪ್‌, ಪಾಕಿಸ್ತಾನ ಮತ್ತು ಅಲ್ಲಿನ ಸೇನಾ ಮುಖ್ಯಸ್ಥ ಆಶಿಮ್ ಮುನೀರ್‌ ಅವರಿಗೆ ಹತ್ತಿರವಾದರು. ತನ್ನ ಮಾತಿಗೆ ಭಾರತ ಬಗ್ಗದೇ ಇದ್ದಾಗ ‘ಭಾರತದ್ದು ಸತ್ತ, ನಿರ್ಜೀವ ಆರ್ಥಿಕತೆ’ ಎಂದೂ ಜರೆದು ಭಾರತದಿಂದ ಮತ್ತಷ್ಟು ದೂರವಾದರು. 

ತೈಲ ಖರೀದಿ ನೆಪದಲ್ಲಿ ಮತ್ತಷ್ಟು ಪ್ರಹಾರ: ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನೇ ನೆಪವಾಗಿಸಿ ದೇಶದ ಮೇಲೆ ಮತ್ತಷ್ಟು ಕಿಡಿಕಾರಿದರು. ಉಕ್ರೇನ್- ರಷ್ಯಾ ನಡುವಿನ ಯುದ್ಧ ನಿಲ್ಲಿಸಲು ಹರಸಾಹಸ ಮಾಡುತ್ತಿರುವ ಅವರು, ರಷ್ಯಾಕ್ಕೆ ಯುದ್ಧ ಮುನ್ನಡೆಸಲು ಬೇಕಾದ ಆರ್ಥಿಕ ಸಂಪನ್ಮೂಲವನ್ನು ಭಾರತ ಒದಗಿಸುತ್ತಿದೆ ಎಂದು ಆರೋಪಿಸುತ್ತಲೇ ಬಂದರು. ನಿರ್ಬಂಧ ಹೇರಿರುವುದರ ಹೊರತಾಗಿಯೂ ಸ್ವತಃ ಅಮೆರಿಕವೇ ರಷ್ಯಾದಿಂದ ಯುರೇನಿಯಂ ಹಾಗೂ ಇನ್ನಿತರ ಅಪರೂಪದ ಲೋಹ, ಖನಿಜಗಳನ್ನು ಖರೀದಿ ಮಾಡುತ್ತಿದ್ದರೂ, ಯುರೋಪ್‌ ರಾಷ್ಟ್ರಗಳು ನೈಸರ್ಗಿಕ ಅನಿಲವನ್ನು ರಷ್ಯಾದಿಂದ ಆಮದು ಮಾಡುತ್ತಿದ್ದರೂ ಟ್ರಂಪ್‌ ಕಣ್ಣಿಗೆ ಬಿದ್ದಿದ್ದು ಭಾರತ ಖರೀದಿಸುತ್ತಿರುವ ತೈಲ ಮಾತ್ರ. ರಷ್ಯಾದ ಪ್ರಮುಖ ಕಚ್ಚಾತೈಲ ಉತ್ಪಾದನಾ ಕಂಪನಿಗಳಾದ ‘ರೋಸ್ನೆಫ್ಟ್‌’ ಮತ್ತು ‘ಲುಕಾಯಿಲ್’ ಮೇಲೆ ಅಮೆರಿಕ ನಿರ್ಬಂಧ ಹೇರಿತು. ಅಮೆರಿಕ ನಿರ್ಬಂಧದ ಪರಿಣಾಮ, ಭಾರತದ ಖಾಸಗಿ ಕಂಪನಿಗಳು ತೈಲ ಖರೀದಿಯನ್ನು ಕಡಿಮೆ ಮಾಡಿದವು.

ರಫ್ತಿಗೆ ತಟ್ಟಿದ ಬಿಸಿ: ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ಭಾರತಕ್ಕೆ ಟ್ರಂಪ್‌ ನೀತಿ ಸಣ್ಣ ಪ್ರಮಾಣದಲ್ಲಿ ಬಿಸಿ ಮುಟ್ಟಿಸಿದೆ. ಸುಂಕ ಹೇರಿಕೆ ಜಾರಿಯಾದ ಸಂದರ್ಭದಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿ, ಹಲವು ಬಾರಿ ಏರಿಳಿತಗಳು ಸಂಭವಿಸಿದ್ದವು. ಆಗಸ್ಟ್ 26ರಂದು ಷೇರು ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹5.41 ಲಕ್ಷ ಕೋಟಿಯಷ್ಟು ಕರಗಿತ್ತು.

ರಫ್ತು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಫ್ತಿನ ಪ್ರಮಾಣ ಈ ವರ್ಷ ಶೇ 37ರಷ್ಟು ಕಡಿಮೆಯಾಗಿದೆ. ಜವಳಿ, ವಜ್ರ, ಆಭರಣ, ಚರ್ಮ ಉತ್ಪನ್ನ, ಔಷಧ ಕ್ಷೇತ್ರಗಳು ಬಾಧಿತವಾಗಿವೆ. ಇದು ಉದ್ಯೋಗ ಕಡಿತ ಮತ್ತು ನಿರುದ್ಯೋಗ ಸಮಸ್ಯೆಗೂ ಕಾರಣವಾಗಿದೆ.‌

ಭಾರತಕ್ಕೆ ಇಕ್ಕಟ್ಟು

ಅಮೆರಿಕದ ಸುಂಕಕ್ಕೆ ಪ್ರತಿಯಾಗಿ ಅಲ್ಲಿನ ಉತ್ಪನ್ನಗಳ ಮೇಲೆ ಚೀನಾವು ಪ್ರತಿಸುಂಕ ಹೇರಿ ಟ್ರಂಪ್‌ ಆಡಳಿತದ ವಿರುದ್ಧ ಸುಂಕ ಸಮರ ನಡೆಸಿತು. ಆದರೆ, ಅಮೆರಿಕ, ರಷ್ಯಾ ಜತೆಗಿನ ಸಂಬಂಧವನ್ನು ಜಾಗರೂಕತೆಯಿಂದ ನಿರ್ವಹಿಸುತ್ತಿರುವ ಭಾರತವು ಅಂತಹ ಕ್ರಮಕ್ಕೆ ಮುಂದಾಗದೇ, ಕಾದು ನೋಡುವ ತಂತ್ರಕ್ಕೆ ಶರಣಾಯಿತು. ಇದೇ ಹೊತ್ತಿನಲ್ಲಿ ಚೀನಾ, ಬ್ರೆಜಿಲ್‌ ಸೇರಿದಂತೆ ‘ಬ್ರಿಕ್ಸ್‌’ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಯತ್ನಿಸಿತು. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿದ್ದರೂ ಎರಡೂ ರಾಷ್ಟ್ರಗಳಿಗೆ ಅಂತಿಮ ತೀರ್ಮಾನಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ.

ಪರ್ಯಾಯ ದಾರಿ ಹುಡುಕಾಟ

ಅಮೆರಿಕದ ಸುಂಕ ನೀತಿ ನ್ಯಾಯಸಮ್ಮತವಾಗಿಲ್ಲ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಮಾರುಕಟ್ಟೆ ಅಗತ್ಯಗಳನ್ನು ಪೂರೈಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭಾರತ ಪ್ರತಿಕ್ರಿಯಿಸಿತ್ತು.  

‘ಭಾರತವು ತನ್ನ ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದರು. ಅಲ್ಲದೆ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಮೂಲಕ ‘ಸ್ವದೇಶಿ ತತ್ವ’ವನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದ್ದರು. 

ಟ್ರಂಪ್ ಸುಂಕ ನೀತಿಯಿಂದ ಬಾಧಿತವಾದ ಜವಳಿ, ಚರ್ಮೋದ್ಯಮ, ವಜ್ರ ಮತ್ತು ಆಭರಣ, ಎಂಜಿನಿಯರಿಂಗ್ ಉತ್ಪನ್ನಗಳು ಹಾಗೂ ಸಾಗರೋತ್ಪನ್ನಗಳ ರಫ್ತುದಾರರಿಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ₹45,060 ಕೋಟಿ ಮೊತ್ತದ ಹೊಸ ಯೋಜನೆಗಳನ್ನು ಪ್ರಕಟಿಸಿತು.

ಟ್ರಂಪ್ ಸುಂಕ ನೀತಿಯ ಪ್ರಹಾರದಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿ ಭಾರತ– ಬ್ರಿಟನ್, ಭಾರತ– ಒಮಾನ್‌, ಭಾರತ– ನ್ಯೂಜಿಲೆಂಡ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದಗಳು ಏರ್ಪಟ್ಟಿವೆ. ಭಾರತ– ಇಥಿಯೋಪಿಯಾ ಸೇರಿದಂತೆ ಹಲವು ದೇಶಗಳ ಜತೆ ವಿವಿಧ ಒಡಂಬಡಿಕೆಗಳು ನಡೆದಿವೆ. ಭಾರತ- ಚೀನಾ ಸಂಬಂಧ ಕೊಂಚ ಸುಧಾರಿಸಿದೆ. ಭಾರತ- ಅಮೆರಿಕ ನಡುವೆ ವ್ಯಾಪರ ಒಪ್ಪಂದದ ಕುರಿತು ಮಾತುಕತೆಗಳು ನಡೆಯುತ್ತಿವೆ. ಡಿಸೆಂಬರ್‌ನಲ್ಲಿ ಭಾರತ– ರಷ್ಯಾ ವಾರ್ಷಿಕ ಶೃಂಗಸಭೆಯೂ ನಡೆದಿದ್ದು, ಸಂಬಂಧ ಗಟ್ಟಿಯಾಗಿದೆ ಎಂಬ ಸಂದೇಶವನ್ನು ಸಾರಿದೆ.

ಹೆಚ್ಚಿನ ಸುಂಕಕ್ಕೆ ಟ್ರಂಪ್ ನೀಡಿರುವ ಕಾರಣಗಳು

* ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಮೇಲೆ ಅಮೆರಿಕ ನಿರ್ಬಂಧಗಳನ್ನು ಹೇರಿದೆ. ಆದರೂ ಭಾರತ ರಷ್ಯಾದಿಂದ ಕಚ್ಚಾ ತೈಲ ಮತ್ತು ಸೇನಾ ಉಪಕರಣಗಳನ್ನು ಖರೀದಿಸುತ್ತಿದೆ

* ಅಮೆರಿಕವು ಭಾರತದ ಜತೆಗೆ ದೊಡ್ಡ ಮಟ್ಟದ ವ್ಯಾಪಾರ ಕೊರತೆ ಹೊಂದಿದ್ದು, ಅದನ್ನು ಸರಿಪಡಿಸಬೇಕಿದೆ

* ಭಾರತ ‘ಸುಂಕಗಳ ರಾಜ’. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಭಾರತ ಅತಿ ಹೆಚ್ಚು ಸುಂಕ ವಿಧಿಸುತ್ತಿದೆ. ಆದರೆ ಅಮೆರಿಕದಿಂದ ಮಾತ್ರ ಸುಂಕ ವಿನಾಯಿತಿಗಳನ್ನು ಪಡೆಯುತ್ತಿದೆ

* ಅಮೆರಿಕದ ಕೃಷಿ ಉತ್ಪನ್ನಗಳಿಗೆ, ವಿಶೇಷವಾಗಿ ಡೇರಿ ಉತ್ಪನ್ನಗಳಿಗೆ ಭಾರತ ತನ್ನ ಮಾರುಕಟ್ಟೆಯನ್ನು ಮುಕ್ತವಾಗಿಸಿಲ್ಲ. ಹಲವಾರು ಕಟ್ಟುನಿಟ್ಟಿನ ನಿಯಮಗಳು ಅದಕ್ಕೆ ಅಡ್ಡಿಯಾಗಿವೆ

* ಭಾರತವು ‘ಬ್ರಿಕ್ಸ್’ ಸಂಘಟನೆಯಲ್ಲಿ ಸಕ್ರಿಯವಾಗಿದೆ. ಈ ಸಂಘಟನೆಯು ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ

ಬ್ರಿಕ್ಸ್‌ ‌ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ
ಭಾರತ–ಅಮೆರಿಕ ಧ್ವಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.