ADVERTISEMENT

ಕ್ಷುಲ್ಲಕ ರಾಜಕೀಯ ಮಾಡಬೇಡಿ: ರಾಹುಲ್‌ ಗಾಂಧಿ ವಿರುದ್ಧ ಅಮಿತ್‌ ಶಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 6:25 IST
Last Updated 20 ಜೂನ್ 2020, 6:25 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ    

ನವದೆಹಲಿ: ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಟೀಕೆಗಳ ಸುರಿಮಳೆ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಟ್ವಿಟರ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ. ‘ರಾಹುಲ್‌ ಗಾಂಧಿ ಅವರು ‘ಕ್ಷುಲ್ಲಕ ರಾಜಕೀಯ’ವನ್ನೂ ಮೀರಿ ದೇಶದ ಹಿತಾಸಕ್ತಿಯ ವಿಚಾರದಲ್ಲಿ ಒಗ್ಗಟ್ಟಾಗಿ ನಿಲ್ಲಲಿ ಎಂದು ಹೇಳಿದ್ದಾರೆ.

ಗಾಲ್ವಾನ್‌ ಕಣಿವೆಯಲ್ಲಿ ಚೀನಾ ಜತೆ ನಡೆದ ಸಂಘರ್ಷದಲ್ಲಿ ಗಾಯಗೊಂಡ ಯೋಧರೊಬ್ಬರ ತಂದೆಯ ವಿಡಿಯೋವೊಂದನ್ನು ಸುದ್ದಿ ಸಂಸ್ಥೆ ಎಎನ್‌ಐ ಶನಿವಾರ ಟ್ವೀಟ್‌ ಮಾಡಿತ್ತು. ಅದರಲ್ಲಿ ಅವರು, ‘ ಭಾರತ ಚೀನಾವನ್ನು ಸೋಲಿಸುವಷ್ಟು ಶಕ್ತವಾಗಿದೆ. ರಾಹುಲ್‌ ಗಾಂಧಿ ಇದರಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ನನ್ನ ಮಗ ಸೇನೆಯಲ್ಲಿ ಹೋರಾಡಿದ್ದಾನೆ. ಮುಂದೆಯೂ ಹೋರಾಡುತ್ತಾನೆ,’ ಎಂದು ಹೇಳಿದ್ದರು.

ಎಎನ್‌ಐನ ಈ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿರುವ ಅಮಿತ್‌ ಶಾ, ‘ವೀರ ಯೋಧನ ತಂದೆ ಮಾತನಾಡಿದ್ದಾರೆ. ರಾಹುಲ್‌ ಗಾಂಧಿಗೆ ಅವರು ಅತ್ಯಂತ ಸ್ಪಷ್ಟ ಸಂದೇಶ ನೀಡಿದ್ದಾರೆ,’ ಎಂದು ಹೇಳಿದ್ದಾರೆ.

ADVERTISEMENT

ಸರ್ವಪಕ್ಷ ಸಭೆಯಲ್ಲಿ ಮೋದಿ ನೀಡಿದ್ದ ಹೇಳಿಕೆಗಳಿಗೆ ರಾಹುಲ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಶನಿವಾರವೂ ಕೂಡ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿದ್ದಾರೆ. ಒಂದು ವೇಳೆ ಭೂಪ್ರದೇಶವು ಚೀನಾದ್ದಾಗಿದ್ದರೆ, ಭಾರತೀಯ ಯೋಧರು ಏಕೆ ಹುತಾತ್ಮರಾದರು. ಅವರನ್ನು ಕೊಂದದ್ದು ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ.

‘ನಮ್ಮ ಭೂಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ, ನಮ್ಮ ಭೂಪ್ರದೇಶದೊಳಗೆ ಯಾರೂ ಬಂದಿಲ್ಲ. ಅಥವಾ, ಯಾವುದೇ ಮಿಲಿಟರಿ ಅಧಿಕಾರಿಗಳನ್ನು ಬಂಧಿಸಿಲ್ಲ’ ಎಂದು ಮೋದಿ ಸರ್ವಪಕ್ಷ ಸಭೆಯ ಬಳಿಕ ಹೇಳಿದ್ದರು.

ಆದರೆ, ಮೋದಿ ಅವರು ನೀಡಿರುವ ಈ ಹೇಳಿಕೆಯು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಜೂನ್ 17 ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಗೆ ಹೇಳಿದ್ದಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.