ADVERTISEMENT

ಹಿಂದೂ ದೇವರಿಗೆ ಪ್ರಾರ್ಥಿಸಬೇಡಿ: ಎಎಪಿ ಸಚಿವ ರಾಜೇಂದ್ರ ಪಾಲ್ ವಿವಾದಾತ್ಮಕ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2022, 9:38 IST
Last Updated 7 ಅಕ್ಟೋಬರ್ 2022, 9:38 IST
ರಾಜೇಂದ್ರ ಪಾಲ್ ಗೌತಮ್
ರಾಜೇಂದ್ರ ಪಾಲ್ ಗೌತಮ್   

ನವದೆಹಲಿ: ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ‘ಹಿಂದೂ ದೇವರಿಗೆ ಪ್ರಾರ್ಥಿಸಬೇಡಿ’ ಎಂದುಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ರಾಜೇಂದ್ರ ಪಾಲ್ ಗೌತಮ್ ಹೇಳಿಕೆ ನೀಡಿರುವುದು ವಿವಾದಕ್ಕೀಡಾಗಿದೆ.

ಅ.5ರಂದು (ವಿಜಯದಶಮಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 10 ಸಾವಿರ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಸಿಎಂ ಅರವಿಂದ ಕೇಜ್ರಿವಾಲ್ ಸಂಪುಟ ಸಚಿವರಾದ ರಾಜೇಂದ್ರ ಪಾಲ್ ಗೌತಮ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜತೆಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.

ADVERTISEMENT

ಮತಾಂತರಗೊಂಡ ಬಳಿಕ ಮಾತನಾಡಿರುವ ಅವರು ‘ಬ್ರಹ್ಮ, ವಿಷ್ಣು, ಶಿವ, ರಾಮ, ಶ್ರೀ ಕೃಷ್ಣ, ಗೌರಿ ಮತ್ತು ಗಣಪತಿ ಅಥವಾ ಯಾವುದೇ ಹಿಂದೂ ದೇವರುಗಳ ಪೂಜೆಯನ್ನು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜೇಂದ್ರ ಪಾಲ್ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಕೇಜ್ರಿವಾಲ್ ಸರ್ಕಾರದ ಸಂಪುಟ ಸಚಿವ ರಾಜೇಂದ್ರ ಪಾಲ್ ಅವರು ಹಿಂದೂಗಳ ವಿರುದ್ಧ ಹೇಗೆ ವಿಷವನ್ನು ಉಗುಳುತ್ತಿದ್ದಾರೆ ಎಂಬುದನ್ನು ನೋಡಿ. ಕೇಜ್ರಿವಾಲ್ ಮತ್ತು ಎಎಪಿಯ ಹಿಂದೂ ವಿರೋಧಿ ಮುಖವು ಎಲ್ಲರ ಮುಂದೆ ಅನಾವರಣಗೊಂಡಿದೆ. ಎಎಪಿಗೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ರಾಜೇಂದ್ರ ಪಾಲ್ ಅವರು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಆದೇಶ್ ಗುಪ್ತಾ ಆಗ್ರಹಿಸಿದ್ದಾರೆ.

‘ಜಾತ್ಯತೀತತೆಯ ಬಗ್ಗೆ ಎಎಪಿ ಪಕ್ಷದ ದ್ವಂದ್ವ ನಿಲುವು ಬಯಲಾಗಿದೆ. 10 ಸಾವಿರ ಹಿಂದೂಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವುದು ಗಂಭೀರ ವಿಚಾರ ಎಂದಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್, ರಾಜೇಂದ್ರ ಪಾಲ್ ಅವರನ್ನು ಬಂಧಿಸುವಂತೆ’ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.