ಪಾಟ್ನ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಕಳೆದ ಒಂದು ತಿಂಗಳಿಂದ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಂತರ ಕರಡು ಮತದಾರರ ಪಟ್ಟಿಯನ್ನು ಚುಣಾವಣಾ ಆಯೋಗ ಶುಕ್ರವಾರ ಬಿಡುಗಡೆ ಮಾಡಿದೆ.
ಎಲ್ಲಾ ಮತದಾರರ ಹೆಸರು ಇರುವ ಒಟ್ಟು ಪಟ್ಟಿ ಲಭ್ಯವಾಗಿಲ್ಲ. ಚುನಾವಣಾ ಆಯೋಗದ ಅಂತರ್ಜಾಲ ಪುಟದಿಂದ ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳಬಹುದು.
ಕಳೆದ ಜೂನ್‌ನಿಂದ ಪರಿಷ್ಕರಣೆ ಕಾರ್ಯವನ್ನು ಚುನಾವಣಾ ಆಯೋಗ ಆರಂಭಿಸಿತು. ಈ ಪರಿಷ್ಕರಣೆಗೂ ಮೊದಲು ಬಿಹಾರದಲ್ಲಿ ಒಟ್ಟು 7.93 ಕೋಟಿ ನೋಂದಾಯಿತ ಮತದಾರರು ಇದ್ದರು. ಪರಿಷ್ಕರಣೆ ನಂತರ ಎಷ್ಟು ಮತದಾರರು ಇದ್ದಾರೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಪರಿಷ್ಕೃತ ಮತದಾರರ ಪಟ್ಟಿಯ ಕುರಿತು ಆಕ್ಷೇಪಗಳನ್ನು ಚುನಾವಣಾ ಆಯೋಗ ಆಹ್ವಾನಿಸಿದೆ. ಸೆ. 1ರವರೆಗೂ ಇದು ನಡೆಯಲಿದೆ. ತಪ್ಪಾಗಿ ಪಟ್ಟಿಯಿಂದ ಹೆಸರು ಕೈಬಿಡಲಾದ ಮತದಾರರು ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು ಎಂದು ಆಯೋಗ ಹೇಳಿದೆ.
ಇದೇ ವರ್ಷದ ಅಂತ್ಯದ ಹೊತ್ತಿಗೆ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಹಲವು ಸಂಸದರು ಸಂಸತ್‌ನಲ್ಲಿ ನಿರಂತರ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.