ADVERTISEMENT

ಬೇಹುಗಾರಿಕೆ ಪ್ರಕರಣ: ಡಿಆರ್‌ಡಿಒ ಅಧಿಕಾರಿ ಬಂಧನ

ಪಿಟಿಐ
Published 25 ಫೆಬ್ರುವರಿ 2023, 22:15 IST
Last Updated 25 ಫೆಬ್ರುವರಿ 2023, 22:15 IST
   

ಬಾಲಾಸೋರ್‌, ಒಡಿಶಾ: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯೊಂದಿಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವ ಆರೋಪದ ಮೇಲೆ ಇಲ್ಲಿನ ಡಿಆರ್‌ಡಿಒದ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.

57 ವರ್ಷದ ಬಾಬುರಾಮ್‌ ಡೇ ಬಂಧಿತರು. ತಾಂತ್ರಿಕ ಅಧಿಕಾರಿಯಾಗಿದ್ದ ಇವರನ್ನು ಬಾಲಾಸೋರ್‌ನ ಚಾಂಡೀಪುರದಲ್ಲಿರುವ ಡಿಆರ್‌ಡಿಒದ ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್‌ಗೆ (ಐಟಿಆರ್‌) ನಿಯೋಜಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವು ಶನಿವಾರ ಇವರನ್ನು ನಾಲ್ಕು ದಿನಗಳವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

***

ADVERTISEMENT

ಯುಎಇ ವೈಮಾನಿಕ ಸಮರಾಭ್ಯಾಸ: ತೇಜಸ್‌ ಭಾಗಿ

ನವದೆಹಲಿ : ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭಾರತೀಯ ವಾಯುಪಡೆಯ (ಐಎಎಫ್‌) ತೇಜಸ್‌ ಲಘು ಯುದ್ಧ ವಿಮಾನಗಳು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯಲಿರುವ ವೈಮಾನಿಕ ಸಮರಾಭ್ಯಾಸದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳಲಿವೆ.

‘ಐಎಎಫ್‌, ಐದು ತೇಜಸ್‌ ಯುದ್ಧ ವಿಮಾನಗಳು ಹಾಗೂ ಎರಡು ಸಿ–17 ಗ್ಲೋಬ್‌ಮಾಸ್ಟರ್ 3 ವಿಮಾನಗಳೊಂದಿಗೆ ವೈಮಾನಿಕ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದೆ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

**

ಮಲಹೊರುವ ಪದ್ಧತಿ: ಕಾಯ್ದೆ ಅನುಷ್ಠಾನದ ಕುರಿತ ವರದಿ ಕೇಳಿದ ಸುಪ್ರೀಂ ಕೋರ್ಟ್

ನವದೆಹಲಿ: ತಲೆ ಮೇಲೆ ಮಲಹೊರುವ ಪದ್ಧತಿ ನಿಷೇಧ (ಮ್ಯಾನ್ಯುಯಲ್‌ ಸ್ಕ್ಯಾವೆಂಜಿಂಗ್) ಕಾಯ್ದೆ–2013ರ ಅನುಷ್ಠಾನ ಹಾಗೂ ಈ ಕಾರ್ಯದಲ್ಲಿ ತೊಡಗಿದ್ದ ಜನರ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳ ಸ್ಥಿತಿಗತಿ ಕುರಿತ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇದೇ 22ರಂದು ಅರ್ಜಿಯೊಂದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್‌ ಮತ್ತು ದೀಪಾಂಕರ್‌ ದತ್ತ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ‘ಒಣ ಮಲ ಶೌಚಾಲಯ ನಿರ್ಮೂಲನೆ, ಒಣ ಮಲ ಗುಂಡಿಗಳು ಹಾಗೂ ಕಂಟೋನ್ಮೆಂಟ್‌ ಬೋರ್ಡ್‌ ಹಾಗೂ ರೈಲ್ವೆಯಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳ ಕುರಿತ ರಾಜ್ಯವಾರು ಮಾಹಿತಿ ಒದಗಿಸಿ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.