ತಿರುವನಂತಪುರ: ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರ ತಿರುವನಂತಪುರ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರವೂ ಶೋಧ ಮುಂದುವರೆಸಿದ್ದಾರೆ.
ಇದನ್ನು ವಿರೋಧಿಸಿ, ಬಿನೀಶ್ ಕೊಡಿಯೇರಿ ಮನೆ ಮುಂದೆ ಅವರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಬಿನೀಶ್ ಅವರ ಪತ್ನಿ ಹಾಗೂ ಮಕ್ಕಳನ್ನು ಗೃಹಬಂಧನದಲ್ಲಿಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಕುರಿತು ಸಂಬಂಧಿಕರು ಕೇರಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ನೀಡಿದ್ದು, ಆಯೋಗದ ಸದಸ್ಯರು ಬಿನೀಶ್ ಮನೆ ತಲುಪಿದ್ದಾರೆ.
ಈ ಕುರಿತ ದೂರಿನನ್ವಯ ಪೊಲೀಸ್ ಅಧಿಕಾರಿಗಳು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದು, ಶೋಧ ಅಂತಿಮ ಹಂತದಲ್ಲಿದೆ ಎಂದು ಪ್ರತಿಭಟನನಿರತ ಸಂಬಂಧಿಕರಿಗೆ ಸಮಾಧಾನಪಡಿಸಿದ್ದಾರೆ.
ಬೆಂಗಳೂರು ಡ್ರಗ್ಸ್ ಜಾಲ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿನೀಶ್ ಮನೆಗೆ ಮಂಗಳವಾರ ದಾಳಿ ನಡೆಸಿದ್ದರು. ಮನೆಯಲ್ಲಿ ರೆನಿಟಾ, ಇಬ್ಬರು ಮಕ್ಕಳು ಹಾಗೂ ತಾಯಿ ಇದ್ದಾರೆ. ಬಿನೀಶ್ ಅವರನ್ನು ಈಗಾಗಲೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.