ADVERTISEMENT

₹88 ಕೋಟಿ ಮೌಲ್ಯದ ಮಾದಕವಸ್ತು ವಶ | ನಿರ್ದಾಕ್ಷಿಣ್ಯ ಕ್ರಮ: ಅಮಿತ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2025, 9:18 IST
Last Updated 16 ಮಾರ್ಚ್ 2025, 9:18 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಪಿಟಿಐ ಚಿತ್ರ

ನವದೆಹಲಿ: ಇಂಫಾಲ್ ಮತ್ತು ಗುವಾಹಟಿ ವಲಯಗಳಲ್ಲಿ ₹88 ಕೋಟಿ ಮೌಲ್ಯದ ಮೆಥಾಂಫೆಟಮೈನ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾದಕವಸ್ತು ಜಾಲದ ನಾಲ್ವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅಮಿತ್ ಶಾ, 'ಮಾದಕವಸ್ತು ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.

'ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಉಪಕ್ರಮದ ಭಾಗವಾಗಿ ₹88 ಕೋಟಿ ಮೌಲ್ಯದ ಬೃಹತ್ ಮೆಥಾಂಫೆಟಮೈನ್ ಡ್ರಗ್ಸ್ ಸಾಗಣೆಯ ಜಾಲವನ್ನು ಭೇದಿಸಲಾಗಿದೆ. ಈ ಪ್ರಕರಣ ಸಂಬಂಧ ಇಂಫಾಲ್ ಮತ್ತು ಗುವಾಹಟಿ ವಲಯಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಡ್ರಗ್ಸ್ ವಿರುದ್ಧದ ನಮ್ಮ ಬೇಟೆ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.

ಈ ಬೃಹತ್ ಕಾರ್ಯಾಚರಣೆಗಾಗಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕಕ್ಕೆ (ಎನ್‌ಸಿಬಿ) ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ.

 ಪ್ರತ್ಯೇಕ ಕಾರ್ಯಾಚರಣೆ: ₹88 ಕೋಟಿ ಮೌಲ್ಯದ ಮಾದಕವಸ್ತು ವಶ

ಈಶಾನ್ಯ ರಾಜ್ಯದಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹88 ಕೋಟಿ ಮೌಲ್ಯದ 110 ಕೆ.ಜಿ ನಿಷೇಧಿತ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪುರದ ಲಿಲಾಂಗ್ ಹಾಗೂ ಅಸ್ಸಾಂ– ಮಿಜೋರಾಂ ಗಡಿಯ ಸಿಲ್ಚರ್‌ನಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ಮಾತ್ರೆಗಳನ್ನು ವಶಪಡಿಸಿಕೊಳ್ಳುವುದರ ಜತೆ ನಾಲ್ವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಪ್ರಕಟಣೆ ತಿಳಿಸಿದೆ.

ಖಚಿತ ಮಾಹಿತಿ ಮೇರೆಗೆ ಇಂಫಾಲ್ ವಲಯದ ಅಧಿಕಾರಿಗಳು ಮಾರ್ಚ್‌ 13ರಂದು ಮೊದಲ ಕಾರ್ಯಾಚರಣೆ ನಡೆಸಿದ್ದಾರೆ. ಲಿಲಾಂಗ್‌ ಬಳಿ ಟ್ರಕ್‌ವೊಂದನ್ನು ತಡೆದು ಶೋಧ ನಡೆಸಿದಾಗ 102.39 ಕೆ.ಜಿ ಮೆಥಾಂಫೆಟಮೈನ್ ಮಾತ್ರೆಗಳು ಪತ್ತೆಯಾಗಿವೆ. ಮಾತ್ರೆಗಳನ್ನು ಟ್ರಕ್‌ನ ಟೂಲ್‌ಬಾಕ್ಸ್‌ನಲ್ಲಿ ಇಡಲಾಗಿತ್ತು.

ಎನ್‌ಸಿಬಿ ಗುವಾಹಟಿ ವಲಯದ ಅಧಿಕಾರಿಗಳು ಅದೇ ದಿನ ಸಿಲ್ಚರ್‌ನಲ್ಲಿ ಎಸ್‌ಯುವಿಯೊಂದರಲ್ಲಿ ಸಾಗಿಸುತ್ತಿದ್ದ 7.48 ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.