ADVERTISEMENT

ಒಂದೇ ಎಪಿಕ್ ಸಂಖ್ಯೆ; ಸಮಸ್ಯೆ ಪರಿಹಾರ: ಚುನಾವಣಾ ಆಯೋಗ

ಪಿಟಿಐ
Published 13 ಮೇ 2025, 16:14 IST
Last Updated 13 ಮೇ 2025, 16:14 IST
.
.   

ನವದೆಹಲಿ: ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್‌ ಸಂಖ್ಯೆ ಹೊಂದಿರುವ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ಅಂತಹ ಮತದಾರರಿಗೆ ಹೊಸ ಸಂಖ್ಯೆಗಳೊಂದಿಗೆ ಹೊಸ ಗುರುತಿನ ಚೀಟಿ ನೀಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಮಂಗಳವಾರ ತಿಳಿಸಿವೆ. 

ಒಂದೇ ರೀತಿಯ ಗುರುತಿನ ಚೀಟಿಗಳು ಅಥವಾ ಎಪಿಕ್‌ ಸಂಖ್ಯೆ ಹೊಂದಿರುವ ತುಂಬಾ ಕಡಿಮೆ ಪ್ರಕರಣಗಳು ಪರಿಶೀಲನೆ ವೇಳೆ ಕಂಡುಬಂದಿವೆ. ಸರಾಸರಿ ನಾಲ್ಕು ಮತಗಟ್ಟೆಗಳಲ್ಲಿ ಇಂತಹ ಒಂದು ಪ್ರಕರಣ ಮಾತ್ರ ಗಮನಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ಒಂದೇ ಎಪಿಕ್‌ ಸಂಖ್ಯೆ ಹೊಂದಿರುವವರು ವಿವಿಧ ವಿಧಾನಸಭಾ ಕ್ಷೇತ್ರಗಳು ಮತ್ತು ವಿವಿಧ ಮತಗಟ್ಟೆಗಳಲ್ಲಿನ ಅಸಲಿ ಮತದಾರರೇ ಆಗಿದ್ದಾರೆ ಎಂಬುದು ಕ್ಷೇತ್ರಮಟ್ಟದ ಪರಿಶೀಲನೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿವೆ.

ADVERTISEMENT

ಪ್ರತಿಯೊಬ್ಬ ಮತದಾರರ ಹೆಸರು, ಆತ ವಾಸಿಸುವ ಪ್ರದೇಶದಲ್ಲಿನ ಮತಗಟ್ಟೆಯ ಹೆಸರು ಮತದಾರರ ಪಟ್ಟಿಯಲ್ಲಿದೆ. ಒಂದೇ ಎಪಿಕ್ ಸಂಖ್ಯೆ ಹೊಂದಿರುವ ಯಾವುದೇ ಮತದಾರರಿಗೂ ಇನ್ನೊಂದು ಮತಗಟ್ಟೆಯಲ್ಲಿ ಮತ ಚಲಾಯಿಸಲು ಎಂದಿಗೂ ಅವಕಾಶ ನೀಡಿಲ್ಲ. ಹೀಗಾಗಿ, ಈ ಸಮಸ್ಯೆಯು ಯಾವುದೇ ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದು ಮೂಲಗಳು ಪ್ರತಿಪಾದಿಸಿವೆ.

ಒಂದೇ ಎಪಿಕ್‌ ಸಂಖ್ಯೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸೇರಿದಂತೆ ವಿರೋಧ ಪಕ್ಷಗಳು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಮಾಡಿದ್ದವು. 

‘ಒಂದೇ ಎಪಿಕ್‌ ಸಂಖ್ಯೆ ಹೊಂದಿರುವ ವಿಚಾರವು ಗಮನಕ್ಕೆ ಬಂದಿದೆ. ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಮುಂದಿನ ಮೂರು ತಿಂಗಳಲ್ಲಿ ಸರಿಪಡಿಸಲಾಗುವುದು’ ಎಂದು ಆಯೋಗವು ಮಾರ್ಚ್‌ನಲ್ಲಿ ಹೇಳಿತ್ತು.

2005ರಲ್ಲಿ ಆರಂಭ: ‘ಈ ಸಮಸ್ಯೆ 2005ರಿಂದಲೇ ಆರಂಭವಾಯಿತು ಎಂಬುದನ್ನು ಪತ್ತೆಹಚ್ಚಲಾಗಿದೆ. ಆಗ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭಾ ಕ್ಷೇತ್ರಗಳಿಗೆ ಇಂಗ್ಲಿಷ್‌ ಅಕ್ಷರಗಳು ಹಾಗೂ ಅಂಕಿಗಳ ಸಂಯೋಜನೆ ಒಳಗೊಂಡ ವಿಭಿನ್ನ ನೋಂದಣಿ ಸಂಖ್ಯೆಯನ್ನು ಬಳಸುತ್ತಿದ್ದವು. ಕ್ಷೇತ್ರಗಳ ಮರುವಿಂಗಡಣೆಯ ನಂತರ 2008ರಲ್ಲಿ ಈ ನೋಂದಣಿ ಸಂಖ್ಯೆ ಬದಲಾಯಿಸಬೇಕಾಯಿತು. ಈ ಅವಧಿಯಲ್ಲಿ, ಕೆಲವು ವಿಧಾನಸಭಾ ಕ್ಷೇತ್ರಗಳು ‘ತಪ್ಪಾಗಿ’ ಹಳೆಯ ನೋಂದಣಿ ಸಂಖ್ಯೆ ಬಳಸುವುದನ್ನೇ ಮುಂದುವರಿಸಿದವು ಅಥವಾ ಮುದ್ರಣ ದೋಷದಿಂದಾಗಿ ಇತರ ಕೆಲವು ಕ್ಷೇತ್ರಗಳಿಗೆ ನಿಗದಿಪಡಿಸಿದ ಸಂಖ್ಯೆ ಬಳಸಿದವು’ ಎಂದು ಮೂಲಗಳು ವಿವರಿಸಿವೆ.

99 ಕೋಟಿ ಮತದಾರರ ಮಾಹಿತಿ ಪರಿಶೀಲನೆ

ದೀರ್ಘಕಾಲದಿಂದ ಬಾಕಿಯುಳಿದಿದ್ದ ಈ ಸಮಸ್ಯೆಯನ್ನು ಬಗೆಹರಿಸಲು ಚುನಾವಣಾ ಆಯೋಗವು 99 ಕೋಟಿಗೂ ಹೆಚ್ಚು ಮತದಾರರ ಮಾಹಿತಿಯನ್ನು ಪರಿಶೀಲಿಸಿದೆ ಎಂದು ಮೂಲಗಳು ಹೇಳಿವೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು 4123 ವಿಧಾನಸಭಾ ಕ್ಷೇತ್ರಗಳ ಚುನಾವಣಾ ನೋಂದಣಿ ಅಧಿಕಾರಿಗಳು ಈ ಕಾರ್ಯದಲ್ಲಿ ನೆರವಾಗಿದ್ದಾರೆ. ಭಾರತದಾದ್ಯಂತವಿರುವ 10.50 ಲಕ್ಷ ಮತಗಟ್ಟೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿವೆ. ಪ್ರತಿ ಮತಗಟ್ಟೆಗೆ ಸರಾಸರಿ 1000 ಮತದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.