ADVERTISEMENT

ಅಪಾಯದೊಂದಿಗೆ ಆಡುವ ಆಟಗಾರ: ಶಶಿ ತರೂರ್‌ ಲೇಖನಕ್ಕೆ BJP ಮೆಚ್ಚುಗೆ; ಕೈ ವ್ಯಾಖ್ಯಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2025, 12:27 IST
Last Updated 4 ನವೆಂಬರ್ 2025, 12:27 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ಭಾರತದಲ್ಲಿ ವಂಶಪಾರಂಪರ್ಯ ರಾಜಕೀಯ ಕುರಿತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಇತ್ತೀಚಿನ ಲೇಖನವನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಹಾಲಿ ಬಿಜೆಪಿ ವಕ್ತಾರ ಶೆಹಜಾದ್ ಪುನಾವಾಲಾ ಅವರು ತರೂರ್‌ ಅವರ ಲೇಖನವನ್ನು ಮುಕ್ತಕಂಠದಿಂದ ಹೊಗಳಿದ್ದು, ಅವರೊಬ್ಬ ‘ಖತ್ರೋಂ ಕಿ ಕಿಲಾಡಿ’ (ಅಪಾಯದೊಂದಿಗೆ ಆಡುವ ಆಟಗಾರ) ಎಂದು ಬಣ್ಣಿಸಿದ್ದಾರೆ. ಜತೆಗೆ ಲೇಖನದಲ್ಲಿ ‘ಗಾಂಧಿ’ ಕುಟುಂಬದ ಕುರಿತು ಬರೆದಿದ್ದು, ‘ಸೇಡು ತೀರಿಸಿಕೊಳ್ಳುವ ಮನೋಭಾವದ ಆ ಕುಟುಂಬದಿಂದ ತರೂರ್‌ಗೆ ರಕ್ಷಣೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

‘ಇಂಡಿಯನ್‌ ಪಾಲಿಟಿಕ್ಸ್‌ ಆರ್‌ ಎ ಫ್ಯಾಮಿಲಿ ಬ್ಯುಸಿನೆಸ್‌’ ಎಂಬ ಶೀರ್ಷಿಕೆಯಡಿ ಶಶಿ ತರೂರ್ ಅವರು ಲೇಖನ ಪ್ರಕಟಿಸಿದ್ದರು. ಭಾರತದಲ್ಲಿ ವಂಶಪಾರಂಪರ್ಯವಾಗಿ ರಾಜಕೀಯ ಮಾಡಿಕೊಂಡು ಬಂದ ಮತ್ತು ಪಕ್ಷವನ್ನು ಮುನ್ನಡೆಸಿದ್ದರ ಕುರಿತು ಅವರು ಲೇಖನದಲ್ಲಿ ಉಲ್ಲೇಖಿಸಿದ್ದರು. ಇದರಲ್ಲಿ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಡಿಎಂಕೆ, ತೃಣಮೂಲ ಕಾಂಗ್ರೆಸ್‌ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ ಕುರಿತೂ ಬರೆದಿದ್ದಾರೆ.

ADVERTISEMENT

‘ಈ ವಂಶಪಾರಂಪರ್ಯ ರಾಜಕೀಯವು ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕ. ರಾಜಕೀಯ ನಾಯಕತ್ವ ಎಂಬುದು ಸಾಮರ್ಥ್ಯ, ಬದ್ಧತೆ ಅಥವಾ ಬೇರುಮಟ್ಟದಿಂದ ಕೆಲಸ ಮಾಡಿದ ಅನುಭವದಿಂದ ಬರಬೇಕೇ ಹೊರತು ವಂಶಪಾರಂಪರ್ಯದಿಂದಲ್ಲ. ಹೀಗಾದಲ್ಲಿ ಅಂಥ ಪಕ್ಷ ನಡೆಸುವ ಸರ್ಕಾರ ದುರ್ಬಲವಾಗಿರುತ್ತದೆ. ಆದರೆ ಭಾರತದ ರಾಜಕೀಯದಲ್ಲಿ ಕುಟುಂಬದ ಉಪನಾಮವೇ ಬಹುಮುಖ್ಯ ಪಾತ್ರ ವಹಿಸಿದೆ. ಹೀಗೆ ತಮ್ಮ ಪೂರ್ವಜರಿಂದ ರಾಜಕೀಯವನ್ನು ಅನಾಯಾಸವಾಗಿ ಪಡೆದವರಿಗೆ ಜನರ ಕಷ್ಟಗಳು ಅರ್ಥವಾಗುವುದಿಲ್ಲ. ಕ್ಷೇತ್ರದ ಅಗತ್ಯಗಳಿಗೆ ಅವರು ಎಂದೂ ಸ್ಪಂದಿಸುವುದಿಲ್ಲ ಹಾಗೂ ಕ್ಷೇತ್ರದ ಅಭಿವೃದ್ಧಿ ಮರೀಚಿಕೆಯಾದಲ್ಲಿ ಅವರನ್ನು ಹೊಣೆಗಾರರನ್ನಾಗಿಸುವ ಪ್ರವೃತ್ತಿಯೂ ಕಡಿಮೆ’ ಎಂದು ತರೂರ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಲೇಖನ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪೂನಾವಾಲಾ, ‘ತರೂರ್ ಅವರ ಲೇಖನವು ಸಾಕಷ್ಟು ಒಳನೋಟವನ್ನು ಹೊಂದಿದೆ. ಆದರೆ ಅವರು ಇದಕ್ಕಾಗಿ ಎಂಥ ಸಮಸ್ಯೆ ಎದುರಿಸಬೇಕಾಗಬಹುದು ಎಂಬ ಆತಂಕ ಕಾಡುತ್ತಿದೆ’ ಎಂದಿದ್ದಾರೆ.

‘2017ರಲ್ಲಿ ರಾಹುಲ್ ಗಾಂಧಿ ಅವರನ್ನು ‘ನೆಪೊ ನಾಮ್‌ದಾರ್‌’ ಎಂದು ಕರೆದಿದ್ದೆ. ಆಗ ನನಗೆ ಏನಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆ ವಂಶದ ಮೊದಲ ಕುಟುಂಬಕ್ಕೆ ಸೇಡು ಹೆಚ್ಚು. ಹೀಗಿದ್ದರೂ ನಿಮ್ಮ ಧೈರ್ಯವನ್ನು ಗಮನಿಸಿದರೆ ನೀವು ಅಪಾಯದೊಂದಿಗೆ ಸರಸವಾಡುವವರು ಎಂದೆನಿಸುತ್ತದೆ’ ಎಂದು ಪೂನಾವಾಲಾ ಹೇಳಿದ್ದಾರೆ.

ತರೂರ್ ಅವರ ಲೇಖನಕ್ಕೆ ಕಾಂಗ್ರೆಸ್‌ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ನಾಯಕತ್ವ ಎಂಬುದು ಸದಾ ಸಾಮರ್ಥ್ಯದಿಂದ ಬರುತ್ತದೆ. ಪಂಡಿತ್ ಜವಾಹರಲಾಲ್ ನೆಹರು ಅವರು ದೇಶ ಕಂಡ ಅತ್ಯಂತ ಸಮರ್ಥ ಪ್ರಧಾನಿಯಾಗಿದ್ದವರು. ಇಂದಿರಾ ಗಾಂಧಿ ಅವರು ತಮ್ಮ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದವರು. ರಾಜೀವ್ ಗಾಂಧಿ ಅವರೂ ಈ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಒಂದೊಮ್ಮೆ ಗಾಂಧಿ ಕುಟುಂಬವನ್ನು ವಂಶಪಾರಂಪರ್ಯ ಆಡಳಿತ ಎಂದು ಕರೆಯುವುದಾದರೆ, ಬೇರೆ ಯಾವ ಕುಟುಂಬ ಇಷ್ಟು ಬಲಿದಾನ, ಬದ್ಧತೆ ಮತ್ತು ಸಾಮರ್ಥ್ಯವನ್ನು ತೋರಿದೆ ಎಂಬುದನ್ನು ಹೇಳಲಿ. ದೇಶಕ್ಕಾಗಿ ಇಂಥ ಕೊಡುಗೆಯನ್ನು ಬಿಜೆಪಿ ನೀಡಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿದ್ದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರವನ್ನು ಹೊಗಳಿದ ನಂತರ ಕಾಂಗ್ರೆಸ್ ಮತ್ತು ಶಶಿ ತರೂರ್ ನಡುವೆ ಅಂತರ ಹೆಚ್ಚಾಗಿತ್ತು. ಅವರ ಬಹಳಷ್ಟು ಹೇಳಿಕೆಗಳನ್ನು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಸ್ವಾಗತಿಸಿತ್ತು. ತರೂರ್ ಅವರ ಹೇಳಿಕೆಗಳಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಆಪರೇಷನ್ ಸಿಂಧೂರವನ್ನು ಸಮರ್ಥಿಸಿ ವಿದೇಶಗಳಿಗೆ ಸಂಸದರ ನಿಯೋಗವನ್ನು ಕಳುಹಿಸಿದ ತಂಡಗಳಲ್ಲಿ ತರೂರ್ ಅವರಿಗೂ ಒಂದು ತಂಡದ ನೇತೃತ್ವವನ್ನು ಸರ್ಕಾರ ವಹಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.