ಎಲೆಕ್ಟ್ರಾನಿಕ್ ಮತಯಂತ್ರ
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ಯಂತ್ರದ ತರಂಗಾಂತರಗಳನ್ನು ಪ್ರತ್ಯೇಕಿಸಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಾನು ಹ್ಯಾಕ್ ಮಾಡಬಲ್ಲೆ ಎಂದು ಹೇಳಿದ್ದ ವ್ಯಕ್ತಿಯೊಬ್ಬರ ವಿರುದ್ಧ ಚುನಾವಣಾ ಆಯೋಗವು ಮುಂಬೈ ಸೈಬರ್ ಪೊಲೀಸರಿಗೆ ದೂರು ನೀಡಿದೆ.
ಇವಿಎಂ ಹ್ಯಾಕ್ ವಿಚಾರವಾಗಿ ಸೈಯದ್ ಶುಜಾ ಹೆಸರಿನ ವ್ಯಕ್ತಿಯು ನೀಡಿರುವ ಹೇಳಿಕೆಗಳು ತಪ್ಪು ಮತ್ತು ಆಧಾರ ರಹಿತ ಎಂದು ಮಹಾರಾಷ್ಟ್ರದ ಮುಖ್ಯ ಚುನಾವಣಾ ಆಯುಕ್ತರು (ಸಿಇಒ) ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿದೆ.
ಇವಿಎಂಗಳನ್ನು ತಾನು ಹ್ಯಾಕ್ ಮಾಡಬಲ್ಲೆ ಎಂದು ವ್ಯಕ್ತಿಯೊಬ್ಬರು ಹೇಳಿರುವ ವಿಡಿಯೊ ಒಂದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಹಂಚಿಕೊಂಡ ನಂತರ ಆಯೋಗವು ದೂರು ನೀಡಿದೆ. ಹ್ಯಾಕ್ ಮಾಡುವುದಾಗಿ ಹೇಳಿರುವ ವ್ಯಕ್ತಿಯ ಹೆಸರು ಸೈಯದ್ ಶುಜಾ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಇದೇ ಬಗೆಯ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಶುಜಾ ವಿರುದ್ಧ ದೂರು ದಾಖಲಿಸಲು ಆಯೋಗವು 2019ರಲ್ಲಿಯೂ ಸೂಚನೆ ನೀಡಿತ್ತು. ಶುಜಾ ಬೇರೊಂದು ದೇಶದಲ್ಲಿ ಅಡಗಿದ್ದಾರೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಬಗ್ಗೆ ದೆಹಲಿ ಮತ್ತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಇಂತಹ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿ ಇರುವ ಅಥವಾ ಇಂತಹ ದುರುದ್ದೇಶದ ಕೃತ್ಯಗಳಲ್ಲಿ ಭಾಗಿಯಾಗಿರುವ ಭಾರತದ ಯಾವುದೇ ವ್ಯಕ್ತಿಯನ್ನು ಗುರುತಿಸಿ, ಬಂಧಿಸಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.