ADVERTISEMENT

ಸಿಎಂ ಪಳನಿಸ್ವಾಮಿ ಜನನದ ಬಗ್ಗೆ ಅವಹೇಳನ: ಎ. ರಾಜಾಗೆ ಚುನಾವಣಾ ಆಯೋಗದಿಂದ ನೋಟಿಸ್

ಪಿಟಿಐ
Published 31 ಮಾರ್ಚ್ 2021, 2:02 IST
Last Updated 31 ಮಾರ್ಚ್ 2021, 2:02 IST
ಡಿಎಂಕೆ ಮುಖಂಡ ಎ. ರಾಜಾ
ಡಿಎಂಕೆ ಮುಖಂಡ ಎ. ರಾಜಾ   

ನವದೆಹಲಿ: ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗ ಡಿಎಂಕೆ ಮುಖಂಡ ಎ. ರಾಜಾ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.

ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆಯ 'ಸ್ಟಾರ್ ಪ್ರಚಾರಕ'ರಾಗಿರುವ ಎ. ರಾಜಾ ಅವರನ್ನು ಬುಧವಾರ ಸಂಜೆ 6 ಗಂಟೆಯೊಳಗೆ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ತಿಳಿಸಲಾಗಿದೆ.

ತಳಮಟ್ಟದ ವರದಿಗಳ ಆಧಾರದ ಮೇಲೆ, ಆಯೋಗವು 'ನೀವು ಮಾಡಿದ ಭಾಷಣದ ವಿಷಯಗಳು ಅವಹೇಳನಕಾರಿ ಮಾತ್ರವಲ್ಲದೆ ಅಶ್ಲೀಲವಾಗಿವೆ ಮತ್ತು ಮಹಿಳೆಯರ ಮಾತೃತ್ವದ ಘನತೆಗೆ ಧಕ್ಕೆ ತರುತ್ತದೆ, ಇದು ಮಾದರಿ ನೀತಿ ಸಂಹಿತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ತೋರುತ್ತದೆ' ಎಂದು ಆರೋಪಿಸಿದೆ.

ADVERTISEMENT

ಆಯೋಗವು 'ಮಾರ್ಚ್ 31 ರಂದು 6 ಗಂಟೆ ಅಥವಾ ಅದಕ್ಕೂ ಮುನ್ನ ನಿಮ್ಮ ನಿಲುವನ್ನು ಆಯೋಗಕ್ಕೆ ತಿಳಿಸುವಂತೆ ಅವಕಾಶ ನೀಡಿದೆ, ಒಂದು ವೇಳೆ ಅದು ವಿಫಲವಾದರೆ ಆಯೋಗವು ನಿಮಗೆ ಯಾವುದೇ ಮುನ್ಸೂಚನೆ ನೀಡದೆ ನಿರ್ಧಾರ ತೆಗೆದುಕೊಳ್ಳುತ್ತದೆ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಎ.ರಾಜಾ ಅವರು ಮಾರ್ಚ್ 26 ರಂದು ಥೌಸಂಡ್‌ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಪಳನಿಸ್ವಾಮಿ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿರುವ ಎಐಎಡಿಎಂಕೆ ನೀಡಿದ ದೂರನ್ನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮೂಲಕ ಇಸಿ ಸ್ವೀಕರಿಸಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದೆ.

ಡಿಎಂಕೆ ಸಂಸದರ ವಿರುದ್ಧ ಕೇಂದ್ರ ಅಪರಾಧ ವಿಭಾಗವು ಭಾರತೀಯ ದಂಡ ಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ1951ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

‘ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಉತ್ತಮ ಸಂಬಂಧದಿಂದ ಜನಿಸಿದ ಮಗು, ಆದರೆ ಪಳನಿಸ್ವಾಮಿ ಅಕ್ರಮ ಸಂಬಂಧದಿಂದ ಜನಿಸಿದ ಮತ್ತು ಅಕಾಲಿಕವಾಗಿ ಜನಿಸಿದ ಮಗು' ಎಂದು ರಾಜಾ ಹೇಳಿಕೆ ನೀಡಿದ್ದಾರೆ ಎಂದಿರುವ ಇಸಿ, ಮುಖ್ಯಮಂತ್ರಿಯ ವಿರುದ್ಧ ರಾಜಾ ಮಾಡಿದ ಇತರ ಕೆಲವು ಟೀಕೆಗಳನ್ನು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.