ADVERTISEMENT

ಉತ್ಪನ್ನದ ಮೂಲ ಆಧರಿಸಿ ಶೋಧಕ್ಕೆ ಅವಕಾಶ: ಗ್ರಾಹಕ ವ್ಯವಹಾರಗಳ ಸಚಿವಾಲಯ

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸಿದ್ಧಪಡಿಸಿರುವ ಹೊಸ ಕರಡು

ಪಿಟಿಐ
Published 10 ನವೆಂಬರ್ 2025, 15:42 IST
Last Updated 10 ನವೆಂಬರ್ 2025, 15:42 IST
   

ನವದೆಹಲಿ: ಇ–ವಾಣಿಜ್ಯ ವೇದಿಕೆಗಳು ತಮ್ಮ ಮೂಲಕ ಮಾರಾಟ ಮಾಡುವ ಉತ್ಪನ್ನಗಳನ್ನು ‘ಕಂಟ್ರಿ ಆಫ್‌ ಒರಿಜಿನ್’ (ಯಾವ ದೇಶದಿಂದ ಬಂದ ಉತ್ಪನ್ನ ಎಂಬುದನ್ನು ತಿಳಿಸುವುದು) ಆಧರಿಸಿ ಹುಡುಕಲು ಗ್ರಾಹಕರಿಗೆ ಅವಕಾಶ ಕೊಡಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಇಂಥದ್ದೊಂದು ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಪ್ಯಾಕ್‌ ಮಾಡಲಾದ ಉತ್ಪನ್ನಗಳಿಗೆ ಈ ನಿಯಮ ಅನ್ವಯವಾಗಲಿದೆ. ಡಿಜಿಟಲ್ ಮಾರುಕಟ್ಟೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ನಿಯಮ ಜಾರಿಗೆ ತರುವ ಉದ್ದೇಶವನ್ನು ಸಚಿವಾಲಯ ಹೊಂದಿದೆ.

ಗ್ರಾಹಕರು ಆನ್‌ಲೈನ್‌ ಮೂಲಕ ಖರೀದಿ ಮಾಡುವಾಗ, ಉತ್ಪನ್ನವು ಯಾವ ದೇಶದಿಂದ ಬಂದಿದ್ದು ಎಂಬುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಬೇಕು. ಆಗ ಅವರಿಗೆ ಖರೀದಿ ತೀರ್ಮಾನ ತೆಗೆದುಕೊಳ್ಳಲು ಹೆಚ್ಚಿನ ಸಹಾಯ ಆಗುತ್ತದೆ ಎಂಬ ಉದ್ದೇಶವು ಈ ಪ್ರಸ್ತಾವದ ಹಿಂದಿದೆ.

ADVERTISEMENT

‘ಕಾನೂನು ಮಾಪನಶಾಸ್ತ್ರ (ಪ್ಯಾಕ್ ಮಾಡಿರುವ ಸರಕುಗಳು) ತಿದ್ದುಪಡಿ ನಿಯಮಗಳು – 2025’ರ ಕರಡು, ಈಗ ಜಾರಿಯಲ್ಲಿ ಇರುವ 2011ನೇ ಇಸವಿಯ ನಿಯಮಗಳಲ್ಲಿ ಬದಲಾವಣೆ ತರುತ್ತದೆ. ‘ಆಮದು ಮಾಡಿಕೊಂಡ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರತಿ ಇ–ವಾಣಿಜ್ಯ ವೇದಿಕೆಯೂ, ಯಾವ ದೇಶದಿಂದ ಉತ್ಪನ್ನವನ್ನು ತರಲಾಗಿದೆ ಎಂಬ ಆಧಾರದಲ್ಲಿ ಉತ್ಪನ್ನಗಳ ಶೋಧವನ್ನು ನಡೆಸಲು ಅವಕಾಶ ಮಾಡಿಕೊಡಬೇಕು’ ಎಂದು ತಿದ್ದುಪಡಿಯು ಸೂಚಿಸುತ್ತದೆ.

ತಿದ್ದುಪಡಿಯ ಕರಡು ನಿಯಮಗಳನ್ನು ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕರಡಿನ ಬಗ್ಗೆ ಸಲಹೆ ನೀಡಲು ಸಾರ್ವಜನಿಕರಿಗೆ ನವೆಂಬರ್‌ 22ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಕರಡು, ಭಾರತದಲ್ಲಿ ತಯಾರಾದ ಉತ್ಪನ್ನಗಳ ಹುಡುಕಾಟವನ್ನು ಸುಲಭವಾಗಿಸುವ ಮೂಲಕ ‘ಭಾರತದಲ್ಲೇ ತಯಾರಿಸಿ’ ಹಾಗೂ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಪೂರಕವಾಗಿ ಕೆಲಸ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.