ADVERTISEMENT

ಸರ್ಕಾರ ಉರುಳಿಸಲು ಇಡಿ, ಸಿಬಿಐ ಕೈಹಾಕಬಾರದು: ಸಂಜಯ್‌ ರಾವತ್‌

ಪಿಟಿಐ
Published 2 ಜುಲೈ 2021, 11:55 IST
Last Updated 2 ಜುಲೈ 2021, 11:55 IST
ಸಂಜಯ್‌ ರಾವತ್‌
ಸಂಜಯ್‌ ರಾವತ್‌    

ಮುಂಬೈ:ಇಡಿ, ಸಿಬಿಐನಂತಹ ಕೇಂದ್ರದ ತನಿಖಾ ಸಂಸ್ಥೆಗಳು ಸರ್ಕಾರಗಳನ್ನು ಉರುಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂದು ಶಿವಸೇನಾ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌ ಹೇಳಿದ್ದಾರೆ.

ನವದೆಹಲಿಯಲ್ಲಿ ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನುಇಡಿ, ಸಿಬಿಐ ಗುರಿಯಾಗಿಸಿಕೊಂಡಿವೆ ಎಂದು ಆ‍ಪಾದಿಸಿದರು.

ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯೊಂದಿಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸಂಪರ್ಕವಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಕ್ರಮ ಕೈಗೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಎಂವಿಎ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಕೇಂದ್ರ ತನಿಖಾ ಸಂಸ್ಥೆಗಳು ಗುರಿಯಾಗಿಸಿಕೊಂಡಿವೆ’ ಎಂದು ದೂರಿದರು.

ADVERTISEMENT

ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಎಂವಿಎ ಸರ್ಕಾರದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ರಾಜ್ಯ ರಾಜಕೀಯ ವಲಯಗಳಲ್ಲಿ ಹಲವು ಊಹಾಪೋಹಗಳು ಎದ್ದಿರುವ ಮಧ್ಯೆ, ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಅಪಾಯವಿಲ್ಲ ಎಂದು ರಾವತ್‌ ಹೇಳಿದ್ದಾರೆ.

ವಿರೋಧ ಪಕ್ಷವು ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ ಮತ್ತು ಅನಿಶ್ಚಿತತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೂ ಸಹ, ರಾಜ್ಯ ವಿಧಾನಸಭಾ ಸ್ಪೀಕರ್ ಹುದ್ದೆಯನ್ನು ಎಂವಿಎ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.