ADVERTISEMENT

₹107 ಕೋಟಿ ವಂಚನೆ ಪ್ರಕರಣ: ಅಲಯನ್ಸ್‌ ವಿವಿ ಮಾಜಿ ಕುಲಪತಿ ಬಂಧನ

ಪಿಟಿಐ
Published 9 ಜನವರಿ 2022, 11:26 IST
Last Updated 9 ಜನವರಿ 2022, 11:26 IST
ಮಧುಕರ್ ಜಿ.ಅಂಗುರ್‌
ಮಧುಕರ್ ಜಿ.ಅಂಗುರ್‌   

ನವದೆಹಲಿ: ಶುಲ್ಕವಾಗಿ ಸಂಗ್ರಹಿಸಿದ್ದ ₹ 107 ಕೋಟಿ ವಂಚಿಸಿದ ಆರೋಪದಡಿ ಬೆಂಗಳೂರು ಮೂಲದ ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಮಧುಕರ್ ಜಿ.ಅಂಗುರ್‌ ಬಂಧಿತ ಆರೋಪಿ. ‘ಇವರನ್ನು ಶುಕ್ರವಾರ ಬಂಧಿಸಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಕೋರ್ಟ್‌ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಗುರ್‌ ಮತ್ತು ಇತರರು ವಿದ್ಯಾರ್ಥಿಗಳ ಪೋಷಕರಿಗೆ ಇ–ಮೇಲ್‌ ಸಂದೇಶ ಮತ್ತು ನೋಟಿಸ್‌ ನೀಡಿದ್ದು, ಶುಲ್ಕವನ್ನು ವಿಶ್ವವಿದ್ಯಾಲಯದ ಅಧಿಕೃತ ಖಾತೆ ಬದಲಿಗೆ, ‘ಶ್ರೀವಾರಿ ಎಜುಕೇಷನಲ್‌ ಸರ್ವೀಸಸ್‌’ ಹೆಸರಿನಲ್ಲಿ ತೆರೆದಿರುವ ಖಾತೆಗೆ ಜಮೆ ಮಾಡಬೇಕು ಎಂದು ತಿಳಿಸಿದ್ದರು. ಅದರಂತೆ 2016–17ನೇ ಸಾಲಿನಲ್ಲಿ ಹೀಗೆ ಸುಮಾರು 4,500 ವಿದ್ಯಾರ್ಥಿಗಳ ಪೋಷಕರು ಹಣ ಜಮೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇ.ಡಿ ಅಧಿಕಾರಿಗಳು ಕಳೆದ ಸೆಪ್ಟೆಂಬರ್‌ನಲ್ಲಿ ಅಂಗುರ್‌ ಮತ್ತು ಕುಟುಂಬ ಸದಸ್ಯರಾದ ಪ್ರಿಯಾಂಕಾ ಅಂಗುರ್, ರವಿಕುಮಾರ್ ಕೆ., ಶ್ರುತಿ, ಪಾವನಾ ದಿಬ್ಬೂರ್ ಹೆಸರಿನಲ್ಲಿದ್ದ ₹ 19 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದರು.

ಬೆಂಗಳೂರು ಪೊಲೀಸರು ಮತ್ತು ಇತರೆ ತನಿಖಾ ಸಂಸ್ಥೆಗಳು ಇವರ ವಿರುದ್ಧ 4 ಎಫ್‌ಐಆರ್ ದಾಖಲಿಸಿದ್ದವು. ಇದರ ಅಧ್ಯಯನದ ಬಳಿಕ ಜಾರಿ ನಿರ್ದೇಶನಾಲಯವು ಕ್ರಿಮಿನಲ್‌ ಮೊಕದ್ದಮೆಯನ್ನು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.