ನವದೆಹಲಿ: ಬ್ಯಾಂಕ್ ವಂಚನೆ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭೂಷಣ್ ಪವರ್ ಮತ್ತು ಸ್ಟೀಲ್ ಲಿ. (ಬಿಪಿಸಿಎಲ್)ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಸಿಂಘಲ್ ಪತ್ನಿ ಆರತಿ ಒಡೆತನದ ₹486 ಕೋಟಿ ಮೌಲ್ಯದ ಬಂಗಲೆಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಕ್ರಮ ಜರುಗಿಸಲಾಗಿದ್ದು, ದೆಹಲಿಯ ಅಮೃತಾ ಶೆರ್ಗಿಲ್ ಮಾರ್ಗದಲ್ಲಿರುವ ಬಂಗಲೆಯನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
2019ರ ನವೆಂಬರ್‌ನಲ್ಲಿ ಸಂಜಯ್ ಸಿಂಘಲ್ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಪ್ರಕರಣ ಸಂಬಂಧ ಸಂಜಯ್ ಸೇರಿದಂತೆ ಇತರ ಆರೋಪಿಗಳ ವಿರುದ್ಧದ ವಿಚಾರಣೆ ಇನ್ನೂ ಬಾಕಿ ಇದೆ.
ಸಂಜಯ್ ಸೇರಿದಂತೆ ಇತರ ಆರೋಪಿಗಳು ವಿವಿಧ ಬ್ಯಾಂಕ್‌ಗಳಿಗೆ ₹47,204 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಇದೇ ಪ್ರಕರಣ ಸಂಬಂಧ ಇ.ಡಿ ಈ ಹಿಂದೆಯೂ ವಿವಿಧ ಕಡೆಗಳಲ್ಲಿ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಇದರ ಮೊತ್ತ ₹4,938 ಕೋಟಿಯಷ್ಟಿದ್ದು, ಆ ಪೈಕಿ ₹4,025 ಕೋಟಿಯನ್ನು ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.