ADVERTISEMENT

ಅಹ್ಮದ್‌ ಪಟೇಲ್‌ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪ: 4ನೇ ಬಾರಿ ಇಡಿ ವಿಚಾರಣೆ

ಪಿಟಿಐ
Published 9 ಜುಲೈ 2020, 8:05 IST
Last Updated 9 ಜುಲೈ 2020, 8:05 IST
ದೆಹಲಿಯಲ್ಲಿರುವ ಅಹ್ಮದ್‌ ಪಟೇಲ್‌ ಅವರ ನಿವಾಸ
ದೆಹಲಿಯಲ್ಲಿರುವ ಅಹ್ಮದ್‌ ಪಟೇಲ್‌ ಅವರ ನಿವಾಸ   

ನವದೆಹಲಿ: ಹಣಅಕ್ರಮ ವರ್ಗಾವಣೆ ಪ್ರಕರಣಕ್ಕೆ(ಪಿಎಂಎಲ್‌ಎ) ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಅಹ್ಮದ್‌ ‍ಪಟೇಲ್‌ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ನಾಲ್ಕನೇ ಬಾರಿಗೆ ಗುರುವಾರ ವಿಚಾರಣೆ ನಡೆಸಿದೆ

ಸಂದೇಸರ ಸಹೋದರರ ಬ್ಯಾಂಕಿಗೆ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿದೆ.

ಅಹ್ಮದ್ ‍ಪಟೇಲ್‌ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ಬೆಳಿಗ್ಗೆ 11 ಗಂಟೆ ಸುಮಾರಿಗೆಜಾರಿ ನಿರ್ದೇಶನಾಲಯದ ಮೂವರು ಅಧಿಕಾರಿಗಳು ಭೇಟಿ ನೀಡಿ, ವಿಚಾರಣೆ ನಡೆಸಿದರು.

ADVERTISEMENT

‘ಪ್ರಕರಣ ಸಂಬಂಧ ಜು.2 ರಂದು ಪಟೇಲ್‌ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ಒಳಪಡಿಸಲಾಗಿತ್ತು. ಈ ವೇಳೆ ಒಟ್ಟು 128 ಪ್ರಶ್ನೆಗಳನ್ನು ಅಧಿಕಾರಿಗಳು ಕೇಳಿದ್ದರು.

‘ಇದು ರಾಜಕೀಯ ಪ್ರತೀಕಾರದ ಕ್ರಮ. ಜಾರಿ ನಿರ್ದೇಶನಾಲಯದವರು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ. ಯಾರ ಒತ್ತಡದ ಮೇಲೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ’ ಎಂದು ಪಟೇಲ್‌ ಹೇಳಿದ್ದರು.

ಸಂದೇಸರ ಸಹೋದರ ಜತೆಗಿನ ಮತ್ತು ಸ್ಟರ್ಲಿಂಗ್‌ ಬಯೋಟೆಕ್‌ ಫಾರ್ಮಾಸ್ಯುಟಿಕಲ್‌ ಕಂಪೆನಿಯೊಂದಿಗಿನ ಸಂಬಂಧ ಮತ್ತು ಈ ಪ್ರಕರಣದಲ್ಲಿ ಅಹ್ಮದ್‌ ಕುಟುಂಬಸ್ಥರ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾ‌ಗುತ್ತಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಅಹ್ಮದ್‌ ಪಟೇಲ್‌ ಅವರ ಮಗ ಫೈಜಲ್‌, ಅಳಿಯ ಇರ್ಫಾನ್‌ ಅಹ್ಮದ್‌ ಸಿದ್ಧಿಖಿ ಅವರನ್ನು ಕೂಡ ಕಳೆದ ವರ್ಷವಿಚಾರಣೆಗೆ ಒಳಪಡಿಸಿತ್ತು.

ಅಹ್ಮದ್‌ ಪಟೇಲ್‌ ಅವರು ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ‘ಕೋವಿಡ್ ಸಾಂಕ್ರಾಮಿಕ ಮಾರ್ಗಸೂಚಿ’ ಅನುಸಾರ ಮನೆಯಲ್ಲಿಯೇ ವಿಚಾರಣೆಗೆ ಅನುಮತಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.