ಇಡಿ
ನವದೆಹಲಿ: ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಷವೊಡ್ಡಿ, ಮತಾಂತರ ದಂಧೆ ನಡೆಸುತ್ತಿರುವ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದೆ.
ಮತಾಂತರ ದಂಧೆಯ ಸೂತ್ರಧಾರ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನ ಅಕ್ರಮ ಚಟುವಟಿಕೆಗಳು ಮತ್ತು ವಿದೇಶದಿಂದ ವರ್ಗಾವಣೆಯಾಗಿರುವ ಹಣಕಾಸಿನ ಕುರಿತು ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಉಟ್ರೌಲಾದಲ್ಲಿರುವ 12 ಸ್ಥಳಗಳು ಮತ್ತು ಮುಂಬೈನ ಎರಡು ಕಡೆ ಇ.ಡಿ ಅಧಿಕಾರಿಗಳು ಬೆಳಿಗ್ಗೆ 5 ಗಂಟೆಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 9ರಂದು ಜಾರಿ ನಿರ್ದೇಶನಾಲಯದ ಲಖನೌ ಘಟಕವು ಚಂಗೂರ್ ಬಾಬಾ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣ ದಾಖಲಿಸಿತ್ತು.
ಮತಾಂತರ ಜಾಲ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಚಂಗೂರ್ ಬಾಬಾನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಈಗಾಗಲೇ ಬಂಧಿಸಿದೆ. ದೇಶದಲ್ಲಿ ಈ ಕಾರ್ಯಕ್ಕಾಗಿ ವಿದೇಶಗಳಿಂದ ₹106 ಕೋಟಿಗೂ ಹೆಚ್ಚು ಹಣಕಾಸು ಪಡೆದಿರುವ ಆರೋಪ ಅವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.